ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟ ಕನ್ನಡದ ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್‌

ಕಾಲಿವುಡ್ ಗೆ ಎಂಟ್ರಿ ಕೊಟ್ಟ ಹೊಂಬಾಳೆ ಫಿಲಂಸ್! ಕೆಜಿಎಫ್ ಅನ್ನೋ ಒಂದು ಅದ್ಭುತ ಸಿನಿಮಾ ನಿರ್ಮಾಣ ಮಾಡುವ ಮೂಲಕ ಕನ್ನಡ ಚಿತ್ರರಂಗವನ್ನ ಇಡೀ ವಿಶ್ವದ ಚಿತ್ರರಂಗವೇ ನಿಬ್ಬೆರಗಾಗಿ ನೋಡುವಂತೆ ಮಾಡಿದ ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆ ಅಂದರೆ ಅದು ವಿಜಯ್ ಕಿರಗಂದೂರ್ ಅವರ ಹೊಂಬಾಳೆ ಫಿಲಂಸ್. ಅಪ್ಪು ಅವರೊಟ್ಟಿಗೆ ನಿನ್ನಿಂದಲೇ ಅನ್ನೋ ಸಿನಿಮಾ ಮೂಲಕ ಚಂದನವನದಲ್ಲಿ ಹೆಜ್ಜೆ ಇಟ್ಟ ಈ ಹೊಂಬಾಳೆ ಸಂಸ್ಥೆ ತದ ನಂತರ ಮಾಡಿದ್ದೆಲ್ಲಾ ಈಗ ಇತಿಹಾಸ. ರಾಜಕುಮಾರ, ಕೆಜಿಎಫ್, ಕೆಜಿಎಫ್2, ಕಾಂತಾರ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನ ಅದ್ದೂರಿಯಾಗಿ ನಿರ್ಮಿಸಿ, ಯಶಸ್ವಿಯಾಗಿ ಸಾವಿರಾರು ಕೋಟಿಯನ್ನ ಬಾಚಿಕೊಂಡಿದೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡಿ.

ಈಗಾಗಲೇ ದೇಶ ಮಾತ್ರ ಅಲ್ಲದೆ ಹೊರ ದೇಶಗಳಲ್ಲಿಯೂ ಸದ್ದು ಮಾಡಿರೋ ಈ ಹೊಂಬಾಳೆ ಫಿಲಂಸ್ ಇದೀಗ ಇದೇ ಮೊದಲ ಬಾರಿಗೆ ತಮಿಳು ಭಾಷೆಯಲ್ಲಿ ಸಿನಿಮಾವೊಂದನ್ನ ನಿರ್ಮಾಣ ಮಾಡಲು ಹೊರಟಿದೆ. ಈ ಚಿತ್ರದ ಹೆಸರು ರಘುತಥಾ. ಈ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ಭಾರತೀಯ ಚಿತ್ರರಂಗದ ಸುಪ್ರಸಿದ್ದ ರಾಷ್ಟ್ರ ಪ್ರಶಸ್ತಿ ವಿಜೇತೆ ನಟಿ ಕೀರ್ತಿ ಸುರೇಶ್ ಅವರು ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ತನ್ನ ನೆಲ ಮತ್ತು ತನ್ನ ಜನರ ಅಸ್ತಿತ್ವವನ್ನ ಕಾಪಾಡಿಕೊಳ್ಳಲು ಒಬ್ಬ ಮಹಿಳೆ ಯಾವೆಲ್ಲಾ ರೀತಿಯಾಗಿ ಹೋರಾಟ ಮಾಡುತ್ತಾಳೆ ಅನ್ನೋದರ ಕಥೆಯನ್ನ ಹಾಸ್ಯವಾಗಿ ಹೇಳಲಾಗುತ್ತದೆಯಂತೆ. ಈ ಚಿತ್ರವನ್ನ ಈಗಾಗಲೇ ದಿ ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್ ಗೆ ಕಥೆ, ಚಿತ್ರಕಥೆ ಬರೆದು ಇನ್ನೊಂದಷ್ಟು ವೆಬ್ ಸೀರೀಸ್ ಗಳಿಗೆ ಕೆಲಸ ಮಾಡಿ ಅನುಭವ ಹೊಂದಿರೋ ಸುಮನ್ ಕುಮಾರ್ ಅವರು ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಇದೊಂದು ಪಕ್ಕಾ ಕಾಮಿಡಿ ಡ್ರಾಮಾ ಅಂಡ್ ಮೆಸೇಜ್ ಓರಿಯೆಂಟೆಡ್ ಸಿನಿಮಾ ಆಗಿದ್ದು, ಪ್ರಮುಖ ತಾರಾಗಣದಲ್ಲಿ ರವೀಂದ್ರ ವಿಜಯ್, ಆನಂದ್ಸಾಮಿ, ರಾಜೇಶ್ ಬಾಲಕೃಷ್ಣನ್, ಎಂಎಸ್ ಭಾಸ್ಕರ್ ಸೇರಿದಂತೆ ಒಂದಷ್ಟು ಕಲಾವಿದರು ಇರಲಿದ್ದಾರಂತೆ. ಯಾಮಿನಿ ಯಜ್ನಮೂರ್ತಿ ಅವರ ಕ್ಯಾಮೆರಾ ವರ್ಕ್, ಸೀನ್ ರೋಲ್ಡನ್ ಅವರ ರಾಗ ಸಂಯೋಜನೆ ಈ ಚಿತ್ರಕ್ಕಿರಲಿದೆ. ಸದ್ಯಕ್ಕೆ ಈ ಚಿತ್ರದ ಪೋಸ್ಟ್ರ್ ರಿಲೀಸ್ ಆಗಿ ಗಮನ ಸೆಳೆದಿದ್ದು, ಚಿತ್ರತಂಡ ಈಗಾಗಲೇ ಶೂಟಿಂಗ್ ಶುರು ಮಾಡಿದ್ದು ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ವರ್ಷದ ಮಧ್ಯದಲ್ಲಿ ಚಿತ್ರವನ್ನ ತೆರೆಗೆ ತರುವ ಯೋಜನೆ ಹಾಕಿಕೊಂಡಿದೆಯಂತೆ. ಒಟ್ಟಾರೆಯಾಗಿ ಕನ್ನಡದ ಹೆಮ್ಮೆಯ ಸಿನಿಮಾ ನಿರ್ಮಾಣ ಸಂಸ್ಥೆಯಾಗಿರೋ ಹೊಂಬಾಳೆ ಫಿಲಂಸ್ ರಘುತಥಾ ಸಿನಿಮಾ ಮೂಲಕ ಕಾಲಿವುಡ್ಗೆ ಎಂಟ್ರಿ ಕೊಟ್ಟಿದೆ.

Leave a Reply

%d bloggers like this: