ಸುಮಾರು 500 ಮನೆ ಇರುವ ಊರಲ್ಲಿ ಎಲ್ಲರಿಗು ಒಂದೇ ಹೆಸರು! ಕಾರಣವೇನು ಗೊತ್ತಾ? ರೋಚಕ ಕಥೆ

ಪ್ರಪಂಚದಲ್ಲಿ ಒಂದೇ ರೀತಿಯ ರೂಪವುಳ್ಳ ಏಳು ಜನ ಇರುತ್ತಾರೆ ಎಂದು ಕೇಳಿದ್ದೇವೆ.ಇದು ಸತ್ಯವೋ,ಸುಳ್ಳೋ ಗೊತ್ತಿಲ್ಲ.ಆದರೆ ಇಲ್ಲೊಂದು ಐನೂರು ಕುಟುಂಬ ಇರುವ ಊರಿನಲ್ಲಿ ಎಲ್ಲರಿಗೂ ಒಂದೇ ಹೆಸರಿನಿಂದ ಕರೆಯಲಾಗುತ್ತದೆ.ಈ ಒಂದೇ ಹೆಸರಿನ ಜನ ಇರುವ ಹಳ್ಳಿ ಬೇರೆ ಯಾವುದೋ ದೇಶದಲ್ಲಿಲ್ಲ.ನಮ್ಮ ಕರ್ನಾಟಕ ರಾಜ್ಯದಲ್ಲೇ ಇದೆ.ರಾಜ್ಯದ ಬಾದಾಮಿ ತಾಲ್ಲೂಕಿನ ಹುಲ್ಲಿಕೆರೆ ಇನಾಮು ಎಂಬ ಗ್ರಾಮವೇ ಈ ವಿಚಿತ್ರ ಸಂಗತಿಗೆ ಸುದ್ದಿಯಾಗಿರುವುದು.ಇಂದು ನಾವು 5 ಜೀ ಯುಗದಲ್ಲಿದ್ದರು,ವಿಜ್ಞಾನ ತಂತ್ರಜ್ಞಾನದಲ್ಲಿ ಇಷ್ಟೆಲ್ಲಾ ಮುಂದುವರೆದಿದ್ದರು ಕೂಡ ನಮ್ಮ ಸುತ್ತ ಮುತ್ತ ನಡೆಯುವ ಅನೇಕ ಆಚರಣೆ ಸಂಪ್ರದಾಯಗಳು ನಮ್ಮನ್ನು ಒಮ್ಮೆಲೆ ಅನೇಕ ಪ್ರಶ್ನೆಗಳೊಂದಿಗೆ ಮೌನವಾಗಿಸಿ ಬಿಡುತ್ತವೆ.ಭಾರತ ದೇಶ ವೈವಿಧ್ಯಮಯವಾದ ದೇಶ.ಇಲ್ಲಿ ಹಲವು ಭಾಷೆ,ಸಂಸ್ಕೃತಿ,ಆಚರಣೆ ಸಂಪ್ರದಾಯ,ಆಹಾರ ಶೈಲಿ,ಉಡುಗೆ-ತೊಡುಗೆ ಎಲ್ಲದರಲ್ಲಿಯೂ ವಿಭಿನ್ನತೆಯನ್ನು ಕಾಣಬಹುದಾಗಿರುತ್ತದೆ. ಅಂತೆಯೇ ನಮ್ಮ ಕರ್ನಾಟಕ ರಾಜ್ಯದಲ್ಲಿಯೂ ಕೂಡ ವಿವಿಧ ಊರುಗಳಲ್ಲಿ ಒಂದೊಂದು ಆಚರಣೆ ಸಂಪ್ರದಾಯಗಳನ್ನು ಕಾಣಬಹುದು.

ಕೆಲವೊಂದು ಗ್ರಾಮಗಳಲ್ಲಿ ಅವರ ನಂಬಿಕೆಯನುಸಾರವಾಗಿ ಗ್ರಾಮದೇವತೆಗಳನ್ನು ಪೂಜಿಸುತ್ತಾರೆ.ದೇವರಿಗೆ ಎಂದು ಬಲಿಪೂಜೆ ಕೂಡ ಮಾಡುತ್ತಾರೆ.ಆಯಾ ಗ್ರಾಮಗಳಲ್ಲಿ ಕೆಲವು ಧಾರ್ಮಿಕ ನಂಬಿಕೆಗಳನ್ನಿಟ್ಟುಕೊಂಡು ಬದುಕು ನಡೆಸುತ್ತಿರುತ್ತಾರೆ.ನಾವು ಅದನ್ನ ಮೂಢನಂಬಿಕೆ ಎಂದೇಳಬಹುದು.ಆದರೆ ನಾವು ಅದನ್ನ ವಿರೋಧಿಸಲು ಅವಕಾಶವಿಲ್ಲ.ಅಂತೆಯೇ ಈ ಬಾದಾಮಿ ತಾಲ್ಲೂಕಿನ ಹುಲ್ಲಿಕೆರೆ ಇನಾಮೂ ಗ್ರಾಮದಲ್ಲಿ ಅವರದ್ದೇ ಆದಂತಹ ಕೆಲವು ಧಾರ್ಮಿಕ ನಂಬಿಕೆಗಳನ್ನು ಪಾಲಿಸಿಕೊಂಡು ಬಂದಿರುತ್ತಾರೆ.ಇಲ್ಲಿ ಗದ್ದೆಮ್ಮ ದೇವಿ ಎಂಬ ಗ್ರಾಮ ದೇವತೆ ಇದ್ದಾರೆ.ಈ ದೇವಿಯು ತುಂಬಾ ಪ್ರಭಾವ ಶಕ್ತಿಯನ್ನು ಹೊಂದಿದೆಯಂತೆ.ಈ ಗ್ರಾಮದ ಜನರು ಈ ಗದ್ದೆಮ್ಮ ದೇವತೆಗೆ ಪ್ರತಿ ವರ್ಷ ಹರಕೆ ಕಟ್ಟಿಕೊಂಡು ಪೂಜೆ ಸಲ್ಲಿಸುತ್ತಾರೆ.ಅಚ್ಚರಿ ಅಂದರೆ ಈ ಗ್ರಾಮದಲ್ಲಿ ಗಂಡಾಗಲಿ,ಹೆಣ್ಣಾಗಲಿ ಯಾವುದೇ ಮಕ್ಕಳು ಜನಿಸಿದರು ಆ ಮಗುವಿಗೆ ಈ ಗ್ರಾಮ ದೇವತೆಯಾದ ಗದ್ದೆಮ್ಮ ದೇವಿಯ ಹೆಸರನ್ನೆ ಇಡುತ್ತಾರೆ.

ಹೆಣ್ಣು ಮಗುವಿಗೆ ಗದ್ದೆಮ್ಮ ಎಂದು ಹೆಸರಿಸಿದರೆ, ಗಂಡು ಮಗುವಿಗೆ ಗದ್ದೆಪ್ಪ ಎಂದು ಹೆಸರಿಡುತ್ತಾರೆ.ಇದು ಅವರ ವಾಡಿಕೆಯಂತೆ
ಈ ಮಕ್ಕಳಿಗೆ ಗ್ರಾಮ ದೇವತೆಯ ಹೆಸರಿಡದಿದ್ದಲ್ಲಿ ಆ ಕುಟುಂಬಕ್ಕೆ ಸಂಕಷ್ಟ ತಪ್ಪಿದ್ದಲ್ಲವಂತೆ.ಗದ್ದೆಮ್ಮ ದೇವಿ ಆ ಕುಟುಂಬಕ್ಕೆ ಶಾಪ ನೀಡುತ್ತಾಳಂತೆ.ಇಂತಹ ಭಯವಾದ ನಂಬಿಕೆಯಿಂದ ಅಲ್ಲಿನ ಗ್ರಾಮಸ್ಥರು ತಮ್ಮ ಊರಿಗೆ ಸೊಸೆಯಾಗಿ ಬರುವ ಹೆಣ್ಣು ಮಕ್ಕಳಿಗೂ ಕೂಡ ತವರು ಮನೆಯಲ್ಲಿ ಇಟ್ಟಿದ್ದ ಹೆಸರನ್ನು ತೆಗೆದಾಕಿ ಗದ್ದೆಮ್ಮ ಎಂದೇ ಕರೆಯುತ್ತಾರೆ.ಒಟ್ಟಾರೆಯಾಗಿ ಈ ಆಧುನಿಕ ಕಾಲದಲ್ಲಿಯೂ ಕೂಡ ಕೆಲವು ಸಂಪ್ರದಾಯ ಆಚರಣೆಗಳು ಮೂಢ ನಂಬಿಕೆ ಎಂದೆನಿಸಿದರು ಸಹ ಈ ಇನಾಮೂ ಊರಿನವರು ಇಷ್ಟು ಭಯ ಭಕ್ತಿಯಿಂದ ತಮ್ಮ ಪೂರ್ವಜರು ನಡೆಸಿಕೊಂಡು ಬಂದ ಈ ಆಚರಣೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆಂದರೆ ಆ ಗದ್ದೆಮ್ಮ ದೇವಿಯ ಪ್ರಭಾವ ಶಕ್ತಿ ಎಷ್ಟಿರಬಹುದು ಎಂದು ಊಹೆ ಮಾಡಿಕೊಳ್ಳಬಹುದಾಗಿದೆ.