ಒಂದೇ ಚಿತ್ರದಲ್ಲಿ ಒಂದಾಗಲಿದ್ದಾರೆ ಶಿವಣ್ಣ, ಯೋಗರಾಜ್ ಭಟ್ ಹಾಗೂ ಪ್ರಭುದೇವ ಅವರು

ಬಹಳ ದಿನಗಳಿಂದ ಭಾರಿ ಸುದ್ದಿ ಮಾಡುತ್ತಿದ್ದ ವಿಚಾರ ಇದೀಗ ಸತ್ಯವಾಗಿದೆ. ಅದೇನಪ್ಪಾ ಅಂದ್ರೆ ಯೋಗರಾಜ್ ಭಟ್ ಅವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಆಕ್ಷನ್ ಕಟ್ ಹೇಳಲಿದ್ದಾರೆ ಅನ್ನೋ ಮಾತು. ಇತ್ತೀಚೆಗೆ ತಾನೇ ಯೋಗರಾಜ್ ಭಟ್ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅವರೊಟ್ಟಿಗೆ ಗಾಳಿಪಟ2 ಸಿನಿಮಾ ಮಾಡಿ ಯಶಸ್ವಿಯಾಗಿದ್ದಾರೆ. ಈ ಯಶಸ್ಸಿನ ಬೆನ್ನಲ್ಲೇ ಯೋಗರಾಜ್ ಭಟ್ ಅವರು ಹೊಸ ಚಿತ್ರವೊಂದಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಬಿಝಿ಼ ಆಗಿದ್ದಾರೆ. ಹೌದು ನಿರ್ದೇಶಕ ಯೋಗ ರಾಜ್ ಭಟ್ ಅವರು ಶಿವಣ್ಣನಿಗೆ ನಿರ್ದೇಶನ ಮಾಡಬೇಕು ಎಂಬುದು ಅವರ ಅಸಂಖ್ಯಾತ ಅಭಿಮಾನಿಗಳ ಬಹು ದಿನಗಳ ಕನಸಾಗಿತ್ತು. ಇದೀಗ ಇದು ಸೈಲೆಂಟಾಗಿ ಕಾರ್ಯರೂಪಕ್ಕೆ ಬಂದಿದೆ. ಅಂದ್ಹಾಗೆ ಶಿವಣ್ಣ ಮತ್ತು ಯೋಗರಾಜ್ ಭಟ್ ಅವರ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ಈ ಹೊಸ ಚಿತ್ರಕ್ಕೆ ಕುಲದಲ್ಲಿ ಕೀಳ್ಯಾವುದೋ ಎಂಬ ಟೈಟಲ್ ಇಡಲಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಆದರೆ ಈ ಶೀರ್ಷಿಕೆಯನ್ನೇ ಇಡಲಾಗುತ್ತದೆ ಎಂಬುದು ಇನ್ನೂ ಕೂಡ ಫೈನಲ್ ಆಗಿಲ್ಲ. ಇನ್ನು ಈ ಶಿವಣ್ಣ ಹೊಸ ಚಿತ್ರ ಈಗಾಗಲೇ ಮಲ್ಲೇಶ್ವರಂನಲ್ಲಿ ಮೊದಲ ಹಂತದ ಚಿತ್ರೀಕರಣ ಆರಂಭವಾಗಿದೆ. ಈ ಚಿತ್ರಕ್ಕೆ ರಾಕ್ ಲೈನ್ ವೆಂಕಟೇಶ್ ಅವರು ಬಂಡವಾಳ ಹೂಡುತ್ತಿದ್ದಾರೆ. ಅದರ ಜೊತೆಗೆ ರಾಕ್ ಲೈನ್ ವೆಂಕಟೇಶ್ ಅವರು ವಿಶೇಷವಾಗಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಯೋಗರಾಜ್ ಭಟ್ ಅವರ ಡ್ರಾಮಾ ಚಿತ್ರದಲ್ಲಿ ಕೂಡ ರಾಕ್ ಲೈನ್ ಪೊಲೀಸ್ ಪಾತ್ರದಲ್ಲಿ ನಟಿಸಿದ್ದರು. ಇನ್ನು ಈ ಚಿತ್ರದ ಮತ್ತೊಂದು ಹೈಲೈಟ್ ಅಂದರೆ ಇಂಡಿಯನ್ ಸಿನಿಮಾ ಇಂಡಸ್ಟ್ರಿಯ ಮೈಕಲ್ ಜಾಕ್ಸನ್ ಅಂತಾನೆ ಕರೆಸಿಕೊಳ್ಳುವ ನಟ, ನಿರ್ದೇಶಕ ಡ್ಯಾನ್ಸರ್ ಪ್ರಭುದೇವ ಅವರು ಕೂಡ ಈ ಚಿತ್ರದಲ್ಲಿ ಶಿವಣ್ಣ ಅವರೊಟ್ಟಿಗೆ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟಾರೆಯಾಗಿ ಈ ಇಬ್ಬರು ದಿಗ್ಗಜ ನಟರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದು ಭಾರಿ ಕುತೂಹಲ ಮೂಡಿಸಿದೆ.