ನಾಯಕ ನಟನಾಗಿ ತಮ್ಮ ಚೊಚ್ಚಲ ಚಿತ್ರದ ಶೂಟಿಂಗ್ ಮುಗಿಸಿದ ಸಂಭ್ರಮದಲ್ಲಿ ಚಂದನ್ ಶೆಟ್ಟಿ ಅವರು

ರ್ಯಾಪರ್ ಸಿಂಗರ್ ಕಮ್ ಮ್ಯೂಸಿಕ್ ಡೈರೆಕ್ಟರ್ ಆಗಿರೋ ಚಂದನ್ ಶೆಟ್ಟಿ ಚೊಚ್ಚಲ ಬಾರಿ ನಾಯಕ ನಟರಾಗಿ ನಟಿಸಿರುವ ಎಲ್ರ ಕಾಲೆಳಿಯುತ್ತೆ ಕಾಲ ಸಿನಿಮಾದ ಚಿತ್ರೀಕರಣ ಸಂಪೂರ್ಣವಾಗಿ ಮುಗಿದಿದ್ದು, ಇದೀಗ ಸಿನಿಮಾದ ಹಾಡೊಂದು ಕೂಡ ರಿಲೀಸ್ ಆಗಿದೆ. ಗೋಲ್ಡ್ ಫ್ಯಾಕ್ಟರಿ ಅನ್ನೋ ಹಾಡು ರಿಲೀಸ್ ಆಗಿದ್ದು, ಸಿನಿ ಪ್ರೇಕ್ಷಕರಿಗೆ ಇಷ್ಟವಾಗಿದೆ. ಈಗಾಗಲೇ ಯೂಟ್ಯೂಬ್ ನಲ್ಲಿ ಈ ಗೋಲ್ಡ್ ಫ್ಯಾಕ್ಟರಿ ಸಾಂಗ್ ಟ್ರೆಂಡಿಂಗ್ ನಲ್ಲಿ ಸ್ಥಾನ ಪಡೆದುಕೊಂಡಿದೆ. ಇತ್ತೀಚೆಗೆ ಈ ಎಲ್ರ ಕಾಲೆಳಿಯುತ್ತೆ ಕಾಲ ಸಿನಿಮಾ ತಂಡ ಬೆಂಗಳೂರಿನ ಬನಶಂಕರಿಯಲ್ಲಿರುವ ಸಂಕ್ರಾಂತಿ ಕಲ್ಯಾಣ ಮಂಟಪದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಚಿತ್ರದ ಒಂದಷ್ಟು ಅಪ್ ಡೇಟ್ಸ್ ನೀಡಿದೆ. ಈ ಹಿಂದೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸಿನಿಮಾ ನಿರ್ದೇಶನ ಮಾಡಿದ ನಟ ಕಮ್ ನಿರ್ದೇಶಕ ಸುಜಯ್ ಶಾಸ್ತ್ರಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.

ಚಿತ್ರೀಕರಣ ಮುಗಿಸಿಕೊಂಡಿರುವ ಈ ಚಿತ್ರತಂಡ ಇದೀಗ ಸಿನಿಮಾದ ಪ್ರಮೋಶನ ಕಾರ್ಯದ ಮೊದಲ ಹೆಜ್ಜೆ ಇಡುತ್ತಿದೆ. ಪ್ರತಿ ವಾರಕ್ಕೊಮ್ಮೆ ಒಂದೊಂದು ಹಾಡು ಮತ್ತು ಸಿನಿಮಾದ ಒಂದಷ್ಟು ಕಂಟೆಂಟ್ ಗಳನ್ನ ರಿಲೀಸ್ ಮಾಡುವ ಮೂಲಕ ಪ್ರಚಾರ ಮಾಡುತ್ತೇವೆ ಎಂದು ಚಿತ್ರತಂಡ ತಿಳಿಸಿದೆ. ಎಂಭತ್ತರ ದಶಕದಲ್ಲಿ ನಡೆಯುವ ಕಥೆಯನ್ನ ಸುಜಯ್ ಶಾಸ್ತ್ರಿ ಅವರು ತೆರೆ ಮೇಲೆ ತರುತ್ತಿದ್ದಾರೆ. ಮನುಷ್ಯನಿಗೆ ಜೀವನದಲ್ಲಿ ನಡೆಯುವ ಸನ್ನಿವೇಶ ಯಾವ ರೀತಿ ಪರಿಣಾಮ ದಿಕ್ಕನ್ನ ತೆರೆದುಕೊಳ್ಳುತ್ತದೆ ಅನ್ನೋದು ಕಥಾಹಂದರವಾಗಿದೆಯಂತೆ. ಕಥಾನಾಯಕನಾಗಿ ಚಂದನ್ ಶೆಟ್ಟಿ ನಟಿಸಿದ್ದು, ಚಂದನ್ ಶೆಟ್ಟಿ ಅವರಿಗೆ ಜೋಡಿಯಾಗಿ ಅರ್ಚನಾ ಕಾಣಿಸಿಕೊಂಡಿದ್ದಾರೆ.

ತಾರಾ ಬಳಗದಲ್ಲಿ ಹಿರಿಯ ನಟ ದತ್ತಣ್ಣ, ಮಂಡ್ಯ ರಮೇಶ್, ಮಜಾಭಾರತ ಶೋ ಖ್ಯಾತಿಯ ಮತ್ತು ಬಿಗ್ ಬಾಸ್ 8ರ ವಿಜೇತ ನಟ ಮಂಜು ಪಾವಗಡ, ತಾರಾ ಅನುರಾಧ ಇದ್ದಾರೆ. ಇನ್ನು ಈ ಸಿನಿಮಾಗೆ ಉಷಾ ಗೋವಿಂದ ರಾಜು ಬಂಡವಾಳ ಹೂಡಿಕೆ ಮಾಡಿದ್ದು, ರಾಜ್ ಗುರು ಹೊಸಕೋಟೆ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಒಟ್ಟಾರೆಯಾಗಿ ಇದೀಗ ಎಲ್ರ ಕಾಲೆಳೆಯುತ್ತೆ ಕಾಲ ಸಿನಿಮಾದಲ್ಲಿ ಚಂದನ್ ಶೆಟ್ಟಿ ಬಹಳ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಇಷ್ಟು ದಿನ ಗಾಯಕ ಮತ್ತು ಸಂಗೀತ ನಿರ್ದೇಶಕರಾಗಿ ಮನರಂಜಿಸಿದ್ದ ಚಂದನ್ ಶೆಟ್ಟಿ ನಟರಾಗಿ ಯಾವ ರೀತಿ ಕನ್ನಡ ಸಿನಿ ಪ್ರೇಕ್ಷಕರ ಮನ ಗೆಲ್ಲಲಿದ್ದಾರೆ ಅನ್ನೋದನ್ನ ಚಿತ್ರ ಬಿಡುಗಡೆಯಾದ ನಂತರ ತಿಳಿಯಬಹುದಾಗಿದೆ.

Leave a Reply

%d bloggers like this: