ಮೊದಲ ಬಾರಿಗೆ ಬೇರೆ ದೇಶದಲ್ಲಿ ಕ್ರಿಕೆಟ್ ಆಡುತ್ತಿದ್ದಾರೆ ಕನ್ನಡ ನಟರು

ಇದೇ ಮೊದಲ ಬಾರಿಗೆ ರಾಜ್ ಕಪ್ ಕ್ರಿಕೆಟ್ ಟೂರ್ನಿ ಹೊರ ದೇಶದಲ್ಲಿ ನಡೆಯಲಿದೆ. ಈ ರಾಜ್ ಕಪ್ ಐದನೇ ಆವೃತ್ತಿಯಲ್ಲಿ ಸ್ಯಾಂಡಲ್ ವುಡ್ ನ ಬಹುತೇಕ ಸ್ಟಾರ್ಸ್ ಭಾಗವಹಿಸಲಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಎಲ್ಲಾ ಕಲಾವಿದರು, ತಂತ್ರಜ್ಞರ ನಡುವೆ ಉತ್ತಮ ಭಾಂಧವ್ಯ ಏರ್ಪಡಲು, ಸೌಹಾರ್ದತೆಯ ಭಾವನೆ ಉಂಟಾಗಿ ಎಲ್ಲರೂ ಕೂಡ ಪರಸ್ಪರ ಒಟ್ಟಾಗಿ ಜೊತೆಯಾಗಿ ಸಾಗಲಿ ಎಂಬ ಸದುದ್ದೇಶದಿಂದ ರಾಜ್ ಕಪ್ ಎಂಬುದನ್ನ ಆರಂಭಿಸಲಾಯಿತು. ಅದರಂತೆ ಈ ರಾಜ್ ಕಪ್ ಕಳೆದು ಕೆಲವು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿದೆ. ನಾಲ್ಕು ಆವೃತ್ತಿಗಳನ್ನು ಯಶಸ್ವಿಯಾಗಿ ಪೂರೈಸಿರೋ ರಾಜ್ ಕಪ್ ಕ್ರೆಕೆಟ್ ಇದೀಗ ಐದನೇ ಆವೃತ್ತಿಯ ಫೈನಲ್ ಪಂದ್ಯ ಹೊರ ದೇಶದಲ್ಲಿ ನಡೆಯಲಿದೆ. ಹೌದು ರಾಜ್ ಕಪ್ ಐದನೇ ಆವೃತ್ತಿಯು ಯುಎಇಯ ಶಾರ್ಜಾ ದಲ್ಲಿ ಇದೇ ಸೆಪ್ಟೆಂಬರ್ ತಿಂಗಳ 24ರಂದು ಅದ್ದೂರಿಯಾಗಿ ನಡೆಯಲಿದೆ.

ಈ ಆವೃತ್ತಿಯಲ್ಲಿ ಎಂಟು ತಂಡಗಳಿವೆ. ಈ ಎಂಟು ತಂಡಗಳು ಸುನೀಲ್, ನೀನಾಸಂ ಸತೀಶ್, ಡಾಲಿ ಧನಂಜಯ್, ದಿಗಂತ್, ಶರಣ್, ಡಾರ್ಲಿಂಗ್ ಕೃಷ್ಣ, ಮತ್ತು ಭಜರಂಗಿ ಸಿನಿಮಾ ಖ್ಯಾತಿಯ ಸೌರವ್ ಲೋಕಿ ನಾಯಕತ್ವವನ್ನೊಂದಿದ್ದಾರೆ. ಜೊತೆಗೆ ಈ ಪಂದ್ಯಗಳ ವೀಕ್ಷಣೆಗಾಗಿ ಈಗಾಗಲೇ ಟಿಕೆಟ್ ಬುಕ್ಕಿಂಗ್ ಕೂಡ ನಡೆಯುತ್ತಿದೆ. ಪ್ಲಾಟಿನಮ್ ಲಿಸ್ಟ್ ಜಾಲತಾಣದಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಆರಂಭಗೊಂಡಿದ್ದು, ಒಂದು ಟಿಕೆಟ್ ಗೆ 7.02 ಅಮೆರಿಕನ್ ಡಾಲರ್ ಎಂದು ತಿಳಿದು ಬಂದಿದೆ. ಇನ್ನು ಈ ರಾಜ್ ಕಪ್5 ಸೀಸನ್ ನಲ್ಲಿ ನಟಿ ರಾಗಿಣಿ, ಸಿಂಗರ್ ನವೀನ್ ಸಜ್ಜು, ಡೈರೆಕ್ಟರ್ ನಾಗೇಂದ್ರ ಅರಸ್, ಬಹದ್ದೂರ್ ಚೇತನ್ ಕುಮಾರ್, ತರುಣ್ ಸುಧೀರ್, ನಂದ ಕಿಶೋರ್ ಸೇರಿದಂತೆ ಒಂದಷ್ಟು ಮಂದಿ ಈ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ. ಈ ಕ್ರಿಕೆಟ್ ಟೂರ್ನಿಯನ್ನ ಕರ್ನಾಟಕ ಚಲನಚಿತ್ರ ನೃತ್ಯಗಾರರ ಹಾಗೂ ನೃತ್ಯ ಸಂಯೋಜಕರ ಸಂಘ ಆಯೋಜನೆ ಮಾಡಿದ್ದು, ಈ ಬಾರಿ ಅಪ್ಪು ಅವರ ಸ್ಮರಣಾರ್ಥ ರಾಜ್ ಕಪ್ ಕ್ರಿಕೆಟ್ ಟೂರ್ನಿಯನ್ನ ನಡೆಸುತ್ತಿದ್ದಾರೆ.