ಮತ್ತೊಮ್ಮೆ ಮೋಡಿ ಮಾಡಿದ ಗಣಿ ಭಟ್ರ ಕಾಂಬಿನೇಶನ್, ಗಾಳಿಪಟ2 ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ

ಯೋಗರಾಜ್ ಭಟ್ ಮತ್ತು ಗಣೇಶ್ ಜೋಡಿಯ ಗಾಳಿಪಟ2 ಸಿನಿಮಾ ನಿನ್ನೆ ತಾನೇ ಆಗಸ್ಟ್ 12ರಂದು ರಿಲೀಸ್ ಆಗಿ ಅದ್ದೂರಿಯಾಗಿ ಓಪನಿಂಗ್ ಪಡೆದುಕೊಂಡಿದೆ. ಗಾಳಿಪಟ ಅಂದಾಕ್ಷಣ ದಶಕಗಳ ಹಿಂದೆ ಕನ್ನಡ ಸಿನಿ ಪ್ರೇಕ್ಷಕರನ್ನ ಮೋಡಿ ಮಾಡಿ ಮನರಂಜಿಸಿದ ಮೂವರು ತರಲೆ ಸ್ನೇಹಿತರ ಗ್ಯಾಂಗು, ಅವರ ಪ್ರೀತಿ ಪ್ರೇಮ, ತ್ಯಾಗ ತಕ್ಷಣ ನೆನಪಾಗುತ್ತದೆ. ಗಣೇಶ್ ಅವರ ನಟನೆ ಕಣ್ತುಂಬಿ ಬರುತ್ತದೆ. ಸೂಪರ್ ಹಿಟ್ ಆಗಿದ್ದಂತಹ ಗಾಳಿಪಟದ ಮತ್ತೊಂದು ಭಾಗ ಅಂತಾನೇ ಮೂಡಿಬಂದ ಗಾಳಿಪಟ2 ಸಿನಿಮಾ ಬೇರೆಯದ್ದೇ ಕಥೆಯನ್ನೊಂದಿದೆ. ಹಳೆಯ ಗಾಳಿಪಟ ಸಿನಿಮಾಗೂ ಈ ಗಾಳಿಪಟ ಸಿನಿಮಾಗೂ ಯಾವುದೇ ರೀತಿ ಸಂಬಂಧವಿರುವುದಿಲ್ಲ. ಕೆಲವು ಪಾತ್ರಗಳು ಮಾತ್ರ ಮುಂದುವರಿದರು ಸಹ ಇಡೀ ಕಥಾಹಂದರ ಬೇರೆ ಹೊರಳನ್ನ ಹೊಂದಿದೆ. ಎಂದನಿಂತೆ ರಂಗಾಯಣ ರಘು ಅವರು ಗಣೇಶ್ ಅವರ ತಂದೆಯಾಗಿ ಅಚ್ಚು ಕಟ್ಟಾಗಿ ತಮ್ಮ ಪಾತ್ರ ನಿರ್ವಹಿಸಿ ಪ್ರೇಕ್ಷಕರ ಕಣ್ಣಂಚಿನಲ್ಲಿ ನೀರು ತರಿಸುತ್ತಾರೆ.

ನಗಿಸುತ್ತಾ, ಅಳಿಸುವ ಗಣೇಶ್ ಅವರ ಮನೋಜ್ಞ ನಟನೆಗೆ ಪ್ರೇಕ್ಷಕ ಪ್ರಭು ಫುಲ್ ಮಾರ್ಕ್ಸ್ ನೀಡುತ್ತಾನೆ. ದೂದ್ ಪೇಡ ದಿಗಂತ್ ತಮ್ಮ ಲವಲವಿಕೆಯ ನಟನೆಯ ಮೂಲಕ ಕಚಗುಳಿ ಇಡುತ್ತಾ ಕೊನೆಗೆ ಅವರು ಸಹ ಪ್ರೇಕ್ಷಕನಿಗೆ ಭಾವುಕನಾಗುವಂತೆ ಮಾಡುತ್ತಾರೆ. ಇನ್ನು ನಿರ್ದೇಶಕ ಪವನ್ ಭೂಷಣ್ ಪಾತ್ರದಲ್ಲಿ ತನ್ನ ಕನ್ನಡ ಪ್ರಾಧ್ಯಾಪಕಿಯನ್ನೇ ಲವ್ ಮಾಡಿ ಅದು ಒನ್ ವೇ ಆದಆಗ ಕೇವಲ ಕಲ್ಪನೆಯಲ್ಲೇ ಡ್ರೀಮ್ ಸಾಂಗ್ ಹೋಗಿ ಕೊನೆಗೆ ತಾನು ಪ್ರೀತಿಸುತ್ತಿದ್ದ ಪ್ರಾಧ್ಯಾಪಕಿ ಬೇರೆಯವರನ್ನ ಮದುವೆ ಆದಾಗ ತನ್ನ ನೋವನ್ನ ಕೊನೆವರೆಗೆ ಬಿಗಿ ಹಿಡಿದು ಎಲ್ಲಿಯೂ ಕೂಡ ತನ್ನ ಪ್ರೀತಿಯನ್ನ ವ್ಯಕ್ತಪಡಿಸಲಾಗದೆ ಭಗ್ನ ಪ್ರೇಮಿಯಾಗಿ ನಟಿಸಿದ್ದಾರೆ. ಯೋಗರಾಜ್ ಭಟ್ ಅವರ ಸಿನಿಮಾಗಳು ಅಂದರೆ ಅಲ್ಲಿ ಸಾಮಾನ್ಯವಾಗಿ ಭಾವನಾತ್ಮಕ ಅಂಶಗಳು ಇದ್ದೇ ಇರುತ್ತವೆ. ಗಾಳಿಪಟ2 ಸಿನಿಮಾದಲ್ಲಿಯೂ ಕೂಡ ಅದೇ ಅಂಶಗಳಿದ್ದು ಅದರ ಜೊತೆಗೆ ತುಂಟತನ, ಚೇಷ್ಠೆ, ಕಣ್ಣೀರು ಎಲ್ಲಾವೂ ಕೂಡ ಇವೆ.

ಜೀವನದಲ್ಲಿ ಎಲ್ಲವನ್ನು ಕೂಡ ತುಂಬ ಗಂಭೀರವಾಗಿ ತೆಗೆದುಕೊಂಡು ಸದಾ ಒತ್ತಡದಲ್ಲಿದ್ದು ಜೀವನವನ್ನ ಗೊಂದಲದ ಗೂಢಾಗಿ ಮಾಡಿಕೊಳ್ಳುವ ಬದಲು ಬದಕು ಬಂದಂತೆ ಬದುಕುವುದನ್ನ ಕಲಿತರೆ ಬದುಕು ಸುಂದರವಾಗಿರುತ್ತದೆ ಎಂಬ ಅಂಶ ನಿಜಕ್ಕೂ ಪ್ರೇಕ್ಷಕನಿಗೆ ಮನ ಮುಟ್ಟಿದರೆ ಗಾಳಿಪಟ2 ಸಿನಿಮಾ ಖಂಡಿತಾ ಒಂದು ಅತ್ಯುತ್ತಮ ಸಿನಿಮಾ ಅಂತಾನೇ ಹೇಳಬಹುದು. ರಂಗಾಯಣ ರಘು, ಸುಧಾ ಬೆಳವಾಡಿ, ಅನಂತ್ ನಾಗ್, ಶರ್ಮಿಳಾ ಮಾಂಡ್ರೆ, ದಿಗಂತ್, ಪವನ್ ಕುಮಾರ್, ವೈಭವಿ ಶಾಂಡಿಲ್ಯ, ಸಂಯುಕ್ತಾ ಮೆನನ್, ಶ್ರೀ ನಾಥ್ ಹೀಗೆ ಎಲ್ಲಾ ಕಲಾವಿದರು ಕೂಡ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಒಟ್ಟಾರೆಯಾಗಿ ಗಾಳಿಪಟ2 ಸಿನಿಮಾ ಭಗ್ನ ಪ್ರೇಮಿಗಳಿಗೆ ತಮ್ಮ ಮಾಜಿ ಪ್ರೇಯಸಿಯ ನೆನಪು ಕಾಡಿಸಿ ಕಣ್ಣಂಚಿನಲ್ಲಿ ನೀರರಿಸುವುದು ಮಾತ್ರ ಸುಳ್ಳಲ್ಲ. ಗಾಳಿಪಟ2 ಸಿನಿಮಾ ಮೊದಲನೇ ದಿನ ಪ್ರೇಕ್ಷಕ ಪ್ರಭುವಿನಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.

Leave a Reply

%d bloggers like this: