ಮರಿ ಟೈಗರ್ ವಿನೋದ್ ಪ್ರಭಾಕರ್ ಅವರ ಹೊಸ ಚಿತ್ರಕ್ಕೆ ವಿಲನ್ ಆಗಿ ಕನ್ನಡದ ಖ್ಯಾತ ನಟ

ಸ್ಯಾಂಡಲ್ ವುಡ್ ಯಂಗ್ ಟೈಗರ್ ವಿನೋದ್ ಪ್ರಭಾಕರ್ ಅವರು ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವುಗಳ ಪೈಕಿ ಮಾದೇವ ಎಂಬ ಸಿನಿಮಾ ಕೂಡಾ ಒಂದಾಗಿದೆ. ಈ ಮಾದೇವ ಸಿನಿಮಾದ ಶೀರ್ಷಿಕೆ ಹಾಡು ಮತ್ತು ಮೋಶನ್ ಪೋಸ್ಟರ್ ಈಗಾಗಲೇ ಯೂಟ್ಯೂಬ್ ನಲ್ಲಿ ಸಖತ್ ಮೆಚ್ಚುಗೆ ಪಡೆದುಕೊಂಡಿದೆ. ಇದೀಗ ಈ ಮಾದೇವ ಸಿನಿಮಾದಿಂದ ಹೊಸದೊಂದು ಅಪ್ ಡೇಟ್ ಸಿಕ್ಕಿದೆ. ಅದೇನಪ್ಪಾ ಅಂದ್ರೆ ಮಾದೇವ ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ವಿರುದ್ದ ಖಳ ನಾಯಕನಾಗಿ ಶ್ರೀ ನಗರ ಕಿಟ್ಟಿ ಅವರು ನಟಿಸುತ್ತಿದ್ದಾರೆ. ಶ್ರೀನಗರ ಕಿಟ್ಟಿ ಇತ್ತೀಚೆಗೆ ಸಿಂಪಲ್ ಸುನಿ ಅವರ ಅವತಾರ್ ಪುರುಷ ಸಿನಿಮಾದಲ್ಲಿ ಕೂಡ ವಿಲನ್ ಆಗಿ ನಟಿಸಿದ್ದರು. ಇದೀಗ ಮಾದೇವನಾಗಿರೋ ವಿನೋದ್ ಪ್ರಭಾಕರ್ ಅವರ ವಿರುದ್ದ ತೊಡೆ ತಟ್ಟಲು ಸಜ್ಜಾಗಿದ್ದಾರೆ ಶ್ರೀನಗರ ಕಿಟ್ಟಿ.

ನವೀನ್ ರೆಡ್ಡಿ ಬಿ ಸಾರಥ್ಯದಲ್ಲಿ ಮೂಡಿ ಬರ್ತಿರುವ ಮಾದೇವ ಸಿನಿಮಾ 80ರ ದಶಕದ ಕಥೆಯನ್ನು ಒಳಗೊಂಡಿದೆಯಂತೆ. ಈ ಮಾದೇವ ಚಿತ್ರದಲ್ಲಿ ಮರಿ ಟೈಗರ್ ವಿನೋದ್ ಪ್ರಭಾಕರ್ ನಾಯಕನಾಗಿ ನಟಿಸಿದ್ದು, ಶ್ರೀನಗರ ಕಿಟ್ಟಿ ವಿಲನ್ ಆಗಿ ಸಮುದ್ರ ಎಂಬ ಪವರ್ ಫುಲ್ ಪಾತ್ರ ಮಾಡುತ್ತಿದ್ದಾರೆ. ಶ್ರೀನಗರ ಕಿಟ್ಟಿ ಗ್ಯಾಂಗ್ ಸ್ಟಾರ್ ಆಗಿ ವಿನೋದ್ ಪ್ರಭಾಕರ್ ವಿರುದ್ದ ಆರ್ಭಟಿಸಲಿದ್ದಾರೆ. ಭಂಟಿ ಎಂಬ ಸಿನಿಮಾ ನಿರ್ಮಾಣ ಮಾಡಿರುವ ಆರ್.ಕೇಶವ್ ದೇವಸಂದ್ರ ಅವರು ಮಾದೇವ ಚಿತ್ರಕ್ಕೂ ಕೂಡ ಬಂಡವಾಳ ಹೂಡಿಕೆ ಮಾಡುತ್ತಿದ್ದಾರೆ. ಲವ್ ಗುರು ಸಮಂತ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮಾದೇವ ಸಿನಿಮಾದಲ್ಲಿ ನಟಿ ಶೃತಿ, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ ಸೇರಿದಂತೆ ತಾರಾಗಣದಲ್ಲಿ ಒಂದಷ್ಟು ಖ್ಯಾತ ನಟ ನಟಿಯರು ನಟಿಸುತ್ತಿದ್ದಾರೆ.

ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಗೆ ಜೋಡಿಯಾಗಿ ಸೋನಲ್ ಮೊಂಥೆರೋ ನಾಯಕಿಯಾಗಿ ನಟಿಸುತ್ತಿದ್ದಾರೆ. ಬಾಲಕೃಷ್ಣ ಥೋಟ ಛಾಯಾಗ್ರಹಣ, ಪ್ರದ್ಯೋತ್ಥನ್ ಸಂಗೀತ ಮಾದೇವ ಸಿನಿಮಾಗಿದೆ. ಹೈದ್ರಾಬಾದ್ ರಾಮೋಜಿ ಫಿಲ್ಮ್ ಸಿಟಿ, ಮದ್ದೂರು, ಕನಕಪುರ, ಚನ್ನಪಟ್ಟಣ ಭಾಗದಲ್ಲಿ ಶೇಕಡ ಐವತ್ತರಷ್ಟು ಶೂಟಿಂಗ್ ಕಂಪ್ಲೀಟ್ ಮಾಡಿರುವ ಮಾದೇವ ಚಿತ್ರತಂಡ ಉಳಿದ ಭಾಗದ ಚಿತ್ರೀಕರಣವನ್ನು ಮಲೆನಾಡು ಶಿವಮೊಗ್ಗ ಸೇರಿದಂತೆ ಇತರೆ ಭಾಗಗಳಲ್ಲಿ ನಡೆಸಲು ಯೋಜನೆ ಹಾಕಿಕೊಂಡಿದೆ. ಇನ್ನು ಕ್ರ್ಯಾಕ್ ಚಿತ್ರದ ನಂತರ ವಿನೋದ್ ಪ್ರಭಾಕರ್ ಅವರು ತಮ್ಮದೇ ಆದ ಟೈಗರ್ ಟಾಕೀಸ್ ಎಂಬ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿದ್ದಾರೆ. ತಮ್ಮ ಪ್ರೋಡಕ್ಷನ್ ಹೌಸ್ ನಿಂದ ಲಂಕಾಸುರ ಎಂಬ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಟ್ರೇಲರ್ ಈಗಾಗಲೇ ಭಾರಿ ಕ್ರೇಜ಼್ ಹುಟ್ಟು ಹಾಕಿದೆ.

Leave a Reply

%d bloggers like this: