ಕರ್ನಾಟಕದ ಥಿಯೇಟರ್ ಗಳು ಬೇಕು ಆದರೆ ಕನ್ನಡ ಬೇಡ, ತಮಿಳು ಚಿತ್ರದ ಬೆಂಗಳೂರಿನ ಕಾರ್ಯಕ್ರಮ ಎಲ್ಲಾ ತಮಿಳುಮಯ

ಭಾರತೀಯ ಚಿತ್ರರಂಗದ ಸುಪ್ರಸಿದ್ದ ನಿರ್ದೇಶಕ ಮಣಿರತ್ನಂ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ಪೊನ್ನಿಯನ್ ಸೆಲ್ವನ್ ಭಾಗ1 ಸಿನಿಮಾ ನಿನ್ನೆ ಬೆಂಗಳೂರಿನ ಓರಾಯನ್ ಮಾಲ್ ನಲ್ಲಿ ಟ್ರೇಲರ್ ಬಿಡುಗಡೆ ಮಾಡಿದೆ. ಈ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತೋ ಅಥವಾ ತಮಿಳಿನಾಡಿನಲ್ಲಿ ನಡೆಯಿತೋ ಅನ್ನುವಷ್ಟರ ಮಟ್ಟಿಗೆ ತಮಿಳು ಭಾಷೆಯೇ ಪ್ರಧಾನ ಆಗಿತ್ತು ಎಂದು ಹೇಳ್ಭೋದು. ಯಾಕಂದ್ರೆ ಇಂದು ನಮ್ಮ ಕನ್ನಡ ಸಿನಿಮಾಗಳು ಕರ್ನಾಟಕ ಗಡಿದಾಟಿ ದೇಶ ಮತ್ತು ಹೊರ ದೇಶದಲ್ಲಿಯೂ ಕೂಡ ಅದ್ದೂರಿಯಾಗಿಯೇ ರಿಲೀಸ್ ಆಗ್ತಿದೆ. ಹಾಗಾಗಿ ನಮ್ಮ ಕನ್ನಡ ಭಾಷಾ ನಟ ನಟಿಯರು ಬೇರೆ ರಾಜ್ಯಕ್ಕೆ ಹೋದಾಗ ಅಲ್ಲಿನ ಭಾಷೆ ಕಲಿತು ಅಲ್ಲಿನವರೇನೋ ಎಂಬಂತೆ ಸರಾಗವಾಗಿಯೇ ತಮಿಳು, ತೆಲುಗು ಭಾಷೆಯಲ್ಲಿ ಮಾತನಾಡುತ್ತಾರೆ. ಆದರೆ ಅದೇ ಪರಭಾಷಾ ಸಿನಿಮಾಗಳು ಕರ್ನಾಟಕದಲ್ಲಿ ರಿಲೀಸ್ ಆಗ್ಬೇಕು ಅನ್ನೋ ಸಂಧರ್ಭದಲ್ಲಿ.

ಇಡೀ ಚಿತ್ರತಂಡ ಬೆಂಗ್ಳೂರಿಗೆ ಬಂದು ಅವರದ್ದೇ ಭಾಷಾಮಯ ಮಾಡ್ಬಿಡ್ತಾರೆ. ಅದ್ರಂತೆ ಕೂಡ ನಿನ್ನೆ ನಡೆದ ಪೊನ್ನಿಯನ್ ಸೆಲ್ವನ್ ಪ್ರೀ ರಿಲೀಸ್ ಇವೆಂಟ್ ನಲ್ಲಿಯೂ ಕೂಡ ಆಗಿದೆ. ಪೊನ್ನಿಯನ್ ಸೆಲ್ವನ್ ಸಿನಿಮಾ ಮಣಿರತ್ನಂ ಅವರ ನಿರ್ದೆಶನದಲ್ಲಿ ಮೂಡಿ ಬರ್ತಿರೋ ಕಾದಂಬರಿ ಆಧಾರಿತ ಭಾರಿ ನಿರೀಕ್ಷೆಯ ಸಿನಿಮಾ. ಇದು ಎರಡು ಭಾಗಗಳಲ್ಲಿ ರಿಲೀಸ್ ಆಗುತ್ತದೆ. ಈ ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ಭಾರತೀಯ ಸಿನಿಮಾರಂಗದ ಸುಪ್ರಸಿದ್ದ ಕಲಾವಿದರಾದ ನಟ ವಿಕ್ರಮ್, ಕಾರ್ತಿ, ಜಯಂ ರವಿ, ನಟಿ,ತ್ರಿಷಾ, ಐಶ್ವರ್ಯ ರೈ ಬಚ್ಚನ್ ಸೇರಿದಂತೆ ದಿಗ್ಗಜರು ನಟಿಸುತ್ತಿದ್ದಾರೆ. ಇದೇ ಸೆಪ್ಟೆಂಬರ್ 30ರಂದು ಈ ಪೊನ್ನಿಯನ್ ಸೆಲ್ವನ್ ಭಾಗ1 ರಿಲೀಸ್ ಆಗ್ತಿದೆ. ಇದರ ಹಿನ್ನೆಲೆಯಲ್ಲಿ ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು. ನಟ ಚಿಯಾನ್ ವಿಕ್ರಮ್, ಕಾರ್ತಿ, ನಟಿ ತ್ರಿಷಾ, ನಟಿ ಐಶ್ವರ್ಯ, ಜಯಂ ರವಿ ಬಂದಿದ್ರು. ವಿಕ್ರಮ್ ಅವರು ಕನ್ನಡದಲ್ಲಿ ಮಾತನಾಡುವುದಕ್ಕೆ ಪ್ರಯತ್ನ ಪಟ್ಟಿದ್ದಾರೆ. ಆದರೆ ಅವರ ಭಾಷಾ ಪ್ರೇಮ ಎಷ್ಟಿದೆ ಅನ್ನೋದಕ್ಕೆ ಅವರು ಮೊದಲು ತಮಿಳಿನಲ್ಲಿಯೇ ನಮಸ್ಕಾರ ಎಂದು ಹೇಳಿದ್ರು.

ಕಾರ್ತಿ ಅಂತೂ ಸಂಪೂರ್ಣವಾಗಿ ತಮಿಳಿನಲ್ಲಿಯೇ ಮಾತನಾಡಿದರು. ನಟಿ ತ್ರಿಷಾ, ಐಶ್ವರ್ಯ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಇವರೆಲ್ಲರು ಕೂಡ ಸಂಪೂರ್ಣವಾಗಿ ಇಡೀ ವೇದಿಕೆಯ ಮೇಲೆ ತಮಿಳಿನಲ್ಲಿಯೇ ತಮ್ಮ ಸಿನಿಮಾ ಪ್ರಚಾರ ಮಾಡಿದರು. ಕನ್ನಡ ಬರದಿದ್ದರೆ ಕನಿಷ್ಠ ಇಂಗ್ಲಿಷ್ ಮಾತನಾಡಬೇಕೆನ್ನುವುದು ಇವರಿಗೆ ತಿಳಿದಿಲ್ಲ, ಇನ್ನೊಂದು ಸಂಗತಿ ಅಂದರೆ ಇಡೀ ಓರಾಯನ್ ಮಾಲ್ ನಿನ್ನೆ ತಮಿಳುಮಯ ಆಗಿತ್ತು ಅಂದರೆ ತಪ್ಪಾಗಲಾರದು. ಯಾಕಂದ್ರೆ ಅಲ್ಲಿ ನೆರೆದಿದ್ದ ಬಹುತೇಕರು ತಮಿಳು ಭಾಷಿಕರೇ ಆಗಿದ್ದರು. ಇಲ್ಲಿ ಇನ್ನೊಂದು ಭಾಷೆಯ ಬಗ್ಗೆ ಯಾವುದೇ ರೀತಿ ಟೀಕೆ ಟಿಪ್ಪಣೆ ಮಾಡುತ್ತಿಲ್ಲ. ಆದರೆ ಅವರಲ್ಲಿರೋ ಭಾಷಾ ಪ್ರೇಮ ನಮ್ಮ ಕನ್ನಡದ ನಟ ನಟಿಯರಿಗೆ ಏಕೆ ಇಲ್ಲ ಎಂಬುದೇ ದೊಡ್ಡ ಪ್ರಶ್ನೆ ಮತ್ತು ಆತಂಕ. ಯಾಕಂದ್ರೆ ನಮ್ಮ ನಟರು ಪರಭಾಷೆಗೆ ಹೋದಾಗ ಅಲ್ಲಿ ಕನ್ನಡ ಭಾಷೆಯಲ್ಲಿ ಮಾತನಾಡೊಲ್ಲ. ಸ್ಥಳೀಯ ಭಾಷೆಯನ್ನ ಕಲಿತು ಅಲ್ಲಿನ ಜನರಿಗೆ ಅವರದ್ದೇ ಭಾಷೆಯಲ್ಲಿ ಸಿನಿಮಾ ಬಗ್ಗೆ ತಿಳಿಸ್ತಾರೆ. ಇದನ್ನ ಯಾವ ರೀತಿ ಪರಿಗಣಿಸಬೇಕು ಎಂಬುದು ಮಾತ್ರ ಇಂದಿಗೂ ಕೂಡ ಗೊಂದಲ ಅಂತೇಳ್ಭೋದು. ಕರ್ನಾಟಕದಲ್ಲಿ ಕನಿಷ್ಠ ಕನ್ನಡ ಮಾಡನಾಡಬೇಕೆನ್ನುವ ಪರಿಜ್ಞಾನ ಈ ತಮಿಳು ನಟರಿಗೂ ಬರಲಿಲ್ಲ ಹಾಗೂ ಇದನ್ನ ಆಯೋಜಿಸಿದವರಿಗೂ ಬರಲಿಲ್ಲವೇ ಎನ್ನುವುದು ಈಗ ದೊಡ್ಡ ಪ್ರಶ್ನೆಯಾಗಿದೆ.