ಕರ್ನಾಟಕ ಸರ್ಕಾರದಿಂದಲೇ ಕನ್ನಡ ವಿರೋಧಿ ಕೆಲಸ, ಕನ್ನಡಿಗರ ಆಕ್ರೋಶದ ನಂತರ ತಪ್ಪು ತಿದ್ದಿಕೊಂಡ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕನ್ನಡ ಭಾಷೆ ಕಡೆಗಣನೆಗೆ ಜನರು ಜಾಡಿಸಿದ ನಂತರ ಎಚ್ಚೆತ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಮೊದಲ ಪ್ರಾಧಾನ್ಯತೆ ನೀಡಬೇಕು. ಕನ್ನಡ ಭಾಷೆಯೇ ನಮ್ಮ ಆಡಳಿತ ಭಾಷೆ. ಹೀಗಿರುವಾಗ ಭಾರತೀಯ ಜನತಾ ಪಕ್ಷ ನೇತೃತ್ವದ ಸರ್ಕಾರ ಇತ್ತೀಚೆಗೆ ಅದ್ಯಾಕೋ ಕನ್ನಡ ಭಾಷೆಯನ್ನ ಆಗಾಗ ಕಡೆಗಣಿಸಿ ಹಿಂದಿ ಭಾಷೆಯನ್ನೇ ಮೆರೆಸುವ ಪ್ರಯತ್ನ ಮಾಡುತ್ತಿದೆ. ಕೇಂದ್ರ ಸರ್ಕಾರದ ಯಾವುದೇ ಸಚಿವರು ಅಥವಾ ಇನ್ಯಾವುದೇ ಕೇಂದ್ರ ಸರ್ಕಾರದ ಸಹಯೋಗದಲ್ಲಿ ರಾಜ್ಯ ಸರ್ಕಾರದ ಯೋಜನೆಗಳು ಜಾರಿ ಗೊಳಿಸುವ ಸಂಧರ್ಭ ಕಾರ್ಯಕ್ರಮದ ಸಂಪೂರ್ಣ ನಾಮ ಫಲಕಗಳು ಮತ್ತು ಬ್ಯಾನರ್ ಗಳ ತುಂಬೆಲ್ಲಾ ಬರೀ ಹಿಂದಿ ಭಾಷೆಯೇ ತುಂಬಿ ತುಳುಕುತ್ತಿರುತ್ತದೆ. ಕನ್ನಡ ಭಾಷೆಯನ್ನ ಸಂಪೂರ್ಣವಾಗಿ ಕಡೆಗಣಿಸಿ ಕೇವಲ ಹಿಂದಿ ಭಾಷೆಯಲ್ಲಿ ಕಾರ್ಯಕ್ರಮದ ಎಲ್ಲಾ ಮಾಹಿತಿ ಇರುವಂತೆ ಕಾಣಲಾಗುತ್ತದೆ.

ಅದರಂತೆ ಇತ್ತೀಚೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾಲತಾಣದಲ್ಲಿ ಹಿಂದಿ ಭಾಷೆಯನ್ನು ಹೇರಿಕೆ ಮಾಡುವ ಕೆಲಸಕ್ಕೆ ಮುಂದಾಗಿದೆ. ಇದೇ ಆಗಸ್ಟ್ 15ರಂದು ದೇಶಕ್ಕೆ ಸ್ವಾತಂತ್ರ್ಯ ದೊರೆತು 75 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಅಮೃತಮಹೋತ್ಸವ ಕಾರ್ಯಕ್ರಮ ಮಾಡಲು ಕೇಂದ್ರ ಸರ್ಕಾದ ಯೋಜನೆ ರೂಪಿಸುತ್ತಿದೆ. ಇದರ ನಡುವೆ ಹರ್ ಗರ್ ತಿರಂಗಾ ಅಭಿಯಾನದಡಿಯಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವೆಬ್ ಸೈಟ್ ನಲ್ಲಿ ಕನ್ನಡ ಭಾಷೆಯನ್ನ ಕಡೆಗಣಿಸಿ ಹಿಂದಿ ಪೋಸ್ಟರ್ ಬಳಸುವ ಮೂಲಕ ಆಜಾದಿ ಕಾ ಅಮೃತ ಮಹೋತ್ಸವ ಮತ್ತು ಹರ್ ಘರ್ ತಿರಂಗಾ ಅಭಿಯಾನದ ಪ್ರಚಾರ ಮಾಡುತ್ತಿದೆ. ಅಷ್ಟೇ ಅಲ್ಲದೆ ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಕಲ್ಪ್ ಸೆ ಸಿದ್ದಿ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ್ದಾಗ ಈ ಕಾರ್ಯಕ್ರಮದಲ್ಲಿಯೂ ಕೂಡ ಕಾರ್ಯಕ್ರಮದ ಬ್ಯಾನರ್ ಅಲ್ಲಿ ಕನ್ನಡ ಭಾಷೆಯನ್ನ ಕಡೆಗಣಿಸಿ ಹಿಂದಿ ಭಾಷೆಗೆ ಪ್ರಾಮುಖ್ಯ ನೀಡಲಾಗಿತ್ತು.

ರಾಜ್ಯ ಸರ್ಕಾರದ ಎಲ್ಲಾ ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೂ ಕೂಡ ಯಾರೂ ಸಹ ಈ ವಿಚಾರದ ಬಗ್ಗೆ ಚಕಾರವೆತ್ತಿಲ್ಲ‌. ಪ್ರತಿ ಬಾರಿ ಕೇಂದ್ರ ಸರ್ಕಾರದ ಯಾವುದೇ ಸಚಿವರು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಕನ್ನಡ ಭಾಷೆಗೆ ಅವಮಾನ ಮಾಡುವಂತಹ ಕೆಲಸವನ್ನು ಈ ಬಿಜೆಪಿ ಸರ್ಕಾರ ಮಾಡುತ್ತಲೆ ಬರುತ್ತಿದೆ. ಅದರಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಈ ಕನ್ನಡ ಭಾಷೆಯ ಧೋರಣೆಯ ಬಗ್ಗೆ ಕನ್ನಡಿಗರು ಹಾಗೂ ಸಿದ್ದರಾಮಯ್ಯ ಅವರು ಅಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಇಲಾಖೆ ತನ್ನ ತಪ್ಪನ್ನು ತಿದ್ದಿಕೊಂಡು ಇದೀಗ ಕನ್ನಡ ಭಾಷೆಯಲ್ಲಿ ಪೋಸ್ಟರ್ ಮಾಡುವ ಮೂಲಕ ಅಮೃತಮಹೋತ್ಸವ ಕಾರ್ಯಕ್ರಮವನ್ನ ಪ್ರಚಾರ ಮಾಡುತ್ತಿದೆ. ಕೆಟ್ಟ ಮೇಲೆ ಬುದ್ದಿ ಬಂತು ಅನ್ನೋ ಹಾಗೇ ಸರ್ಕಾರಕ್ಕೆ ಪ್ರತಿಬಾರಿ ಎಚ್ಚರಿಸುವ ಕೆಲಸ ಆಗಲೇ ಬೇಕಾಗುತ್ತದೆ ಎಂದು ಅನಿಸುತ್ತದೆ.

Leave a Reply

%d bloggers like this: