ಕನ್ನಡದಲ್ಲಿ ಡಬ್ ಆಗಿ ಬರುತ್ತಿದೆ ಮತ್ತೊಂದು ಹೊಸ ಧಾರಾವಾಹಿ

ಕನ್ನಡ ಕಿರುತೆರೆಯಲ್ಲಿ ಮತ್ತೊಂದು ಡಬ್ಬಿಂಗ್ ಧಾರಾವಾಹಿ ಬರಲು ಸಜ್ಜಾಗಿದೆ. ಇತ್ತೀಚೆಗೆ ಕೆಲವು ವರ್ಷಗಳ ಹಿಂದೀಚೆಗೆ ಕಿರುತೆರೆ ಲೋಕ ಬಹಳ ವಿಸ್ತಾರತೆಗೆ ತೆರೆದುಕೊಳ್ಳುತ್ತಿದೆ. ಆರಂಭದ ದಿನಗಳಲ್ಲಿ ಈ ಡಬ್ಬಿಂಗ್ ಗಾಗಿ ಅನೇಕ ವಿರೋಧ ಅಪಸ್ವರಗಳು ಕೇಳಿ ಬಂದಿದ್ದವು. ಅದರ ಜೊತೆಗೆ ಹೋರಾಟ ಕೂಡ ನಡೆದಿತ್ತು. ಆದರೆ ನ್ಯಾಯಾಲಯದ ಆದೇಶದ ಮೇರೆಗೆ ಈ ಡಬ್ಬಿಂಗ್ ಕಾರ್ಯ ಕೆಲಸಗಳಿಗೆ ಜೀವ ಬಂದಿತು. ಇದೀಗ ಕನ್ನಡ ಕಿರುತೆರೆಯಲ್ಲಿ ಮೂಲ ಕನ್ನಡ ಧಾರಾವಾಹಿಗಳಿಗಿಂತ ಪರಭಾಷೆಯ ಧಾರಾವಾಹಿಗಳು ಕನ್ನಡ ಭಾಷೆಗೆ ಡಬ್ ಆಗಿ ಬರುತ್ತಿವೆ. ಇದಕ್ಕೆ ನಮ್ಮ ಕನ್ನಡ ಧಾರಾವಾಹಿಗಳು ಹಿಂದೆ ಬಿದ್ದಿಲ್ಲ ನಮ್ಮಲ್ಲಿಯೂ ಕೂಡ ಉತ್ತಮ ಗುಣಮಟ್ಟದ ಕಂಟೆಂಟ್ ಮತ್ತು ಅತ್ಯುತ್ತಮ ಮೇಕಿಂಗ್ ಮೂಲಕ ಧಾರಾವಾಹಿ ನಿರ್ಮಾಣ ಮಾಡಬಲ್ಲೆವು ಎಂಬುದನ್ನ ನಮ್ಮ ಕನ್ನಡ ಕಿರುತೆರೆ ಭಾರಿ ಸ್ಪರ್ಧಾತ್ಮಕವಾಗಿ ಮುನ್ನೆಡೆಯುತ್ತಿವೆ. ಅದಕ್ಕೆ ಸಾಕ್ಷಿಯಾಗಿ ನಮ್ಮ ಕನ್ನಡದ ಅಪಾರ ಜನಪ್ರಿಯ ಧಾರಾವಾಹಿಗಳಾದ ನಾಗಿಣಿ, ಕನ್ನಡತಿ, ನಮ್ಮನೆ ಯುವರಾಣಿ ಅಂತಹ ಧಾರಾವಾಹಿಗಳು ಪರಭಾಷೆಗೆ ಡಬ್ ಆಗಿವೆ.

ಈ ಮೂಲಕ ಕನ್ನಡ ಭಾಷೆಯ ಧಾರಾವಾಹಿಗಳು ನಮ್ಮ ನೆಲದ ಕಥೆಯನ್ನ ಪರಭಾಷೆಗಳಲ್ಲಿ ಪಸರಿಸುವಂತೆ ಮಾಡುತ್ತಿವೆ. ಇದರ ಜೊತೆಗೆ ಪರಭಾಷೆಯ ಧಾರಾವಾಹಿಗಳು ಕೂಡ ಕನ್ನಡ ಭಾಷೆಯಲ್ಲಿ ಡಬ್ ಆಗಿ ಮೂಡಿ ಬರುತ್ತಿವೆ. ಅದರ ಸಾಲಿಗೆ ಇದೀಗ ಹೊಸ ಸೇರ್ಪಡೆ ಆಗುತ್ತಿರುವುದು ತೆಲುಗಿನ ಇಂಟಿಗುಟ್ಟು ಎಂಬ ಧಾರಾವಾಹಿ. ಹೌದು ತೆಲುಗಿನ ಪ್ರಸಿದ್ದ ಕಿರುತೆರೆ ವಾಹಿನಿಯಾದ ಜೀ಼ ತೆಲುಗಿನಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಇಂಟಿಗುಟ್ಟು ಧಾರಾವಾಹಿ ಇದೀಗ ಕನ್ನಡದಲ್ಲಿ ಮನೆ ಮಗಳು ಎಂಬ ಶೀರ್ಷಿಕೆಯ ಮುಖಾಂತರ ಕನ್ನಡ ಕಿರುತೆರೆ ವೀಕ್ಷಕರನ್ನ ಮನರಂಜಿಸಲು ಬರುತ್ತಿದೆ. ಈಗಾಗಾಲೇ ಈ ಮನೆ ಮಗಳು ಹೊಸ ಧಾರಾವಾಹಿಯ ಪ್ರೋಮೋ ಬಿಡುಗಡೆಯಾಗಿದ್ದು ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಸಾಮಾನ್ಯವಾಗಿ ಬಹುತೇಕ ಡಬ್ಬಿಂಗ್ ಧಾರಾವಾಹಿಗಳು ಮಧ್ಯಾಹ್ನದ ಸಮಯದಲ್ಲಿಯೇ ಪ್ರಸಾರವಾಗುತ್ತಿವೆ. ಅದರಂತೆ ಈ ಮನೆಮಗಳು ಧಾರಾವಾಹಿ ಕೂಡ ಜೀ಼ ಕನ್ನಡ ವಾಹಿನಿಯಲ್ಲಿ ಮಧ್ಯಾಹ್ನದ ಸಮಯದಲ್ಲಿ ಪ್ರಸಾರವಾಗಲಿದೆ ಎಂದು ಮೂಲಗಳು ತಿಳಿಸಿವೆ.