ಕನ್ನಡದ ಗಜರಾಮನ ಜೊತೆ ಸೆಣಸಾಡಲು ಸಜ್ಜಾದ ಬಾಲಿವುಡ್ ವಿಲನ್

ಸ್ಯಾಂಡಲ್ ವುಡ್ ನಲ್ಲಿ ಖ್ಯಾತ ಹಿರಿಯ ಹಾಸ್ಯ ನಟ ಡಿಂಗ್ರಿ ನಾಗರಾಜ್ ಅವರ ಪುತ್ರ ರಾಜವರ್ಧನ್ ಈಗಾಗಲೇ ಸೈಲೆಂಟಾಗಿ ಶೈನ್ ಆಗ್ತಿರೋದು ನಿಮಗೆಲ್ಲರಿಗೂ ಗೊತ್ತೇ ಇದೆ. ಬಿಚ್ಚುಗತ್ತಿ ಸಿನಿಮಾದ ನಂತರ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವುಗಳಲ್ಲಿ ಗಜರಾಮ ಅನ್ನೋ ಆಕ್ಷನ್ ಸಿನಿಮಾ ಕೂಡಾ ಒಂದಾಗಿದೆ. ಇತ್ತೀಚೆಗೆ ಕೆಲವು ದಿನಗಳ ಹಿಂದೆಯಷ್ಟೇ ಈ ಗಜರಾಮ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿತ್ತು. ಇದಾದ ನಂತರ ಮತ್ತೇ ಸುದ್ದಿ ಮಾಡಿದ್ದು ಅಂದರೆ ಅದು ಗಜರಾಮ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಶಿಷ್ಯ ಸಿನಿಮಾ ಖ್ಯಾತಿಯ ನಟ ದೀಪಕ್ ಅವರು ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಅದರಂತೆ ಸಿನಿಮಾ ತಂಡ ಈ ಗಜರಾಮ ಸಿನಿಮಾದ ಆಕ್ಷನ್ ಸೀನ್ ಗಳನ್ನ ಎಚ್.ಎಮ್.ಟಿ ಫ್ಯಾಕ್ಟರಿಯಲ್ಲಿ ಚಿತ್ರೀಕರಣ ಮಾಡುತ್ತಿದೆ.

ಇದೀಗ ಈ ಗಜರಾಮ ಸಿನಿಮಾತಂಡ ಹೊಸದೊಂದು ಸುದ್ದಿ ನೀಡಿದೆ. ಅದೇನಪ್ಪಾ ಅಂದರೆ ಗಜರಾಮ ಸಿನಿಮಾದಲ್ಲಿ ರಾಜವರ್ಧನ್ ಅವರ ಎದುರಿಗೆ ತೊಡೆ ತಟ್ಟಲು ಬಾಲಿವುಡ್ ಖ್ಯಾತ ಖಳ ನಟ ಬಂದಿದ್ದಾರೆ. ಹೌದು ಗಜರಾಮ ಸಿನಿಮಾದಲ್ಲಿ ರಾಜವರ್ಧನ್ ಅವರ ಎದುರಿಗೆ ಸೆಣಸಾಡಲು ಬಾಲಿವುಡ್ ಖ್ಯಾತ ನಟ ‘ಕಬೀರ್ ಸಿಂಗ್’ ಅವರು ಎಂಟ್ರಿ ಆಗಿದ್ದಾರೆ. ಕಳೆದ ಹತ್ತು ದಿನಗಳಿಂದ ಗಜರಾಮ ಸಿನಿಮಾದ ಸಾಹಸ ದೃಶ್ಯ ಸನ್ನಿವೇಶಗಳನ್ನ ಭರದಿಂದ ಸೆರೆ ಹಿಡಿಯಲಾಗುತ್ತಿದೆ. ಈ ಸೆಟ್ ಗೆ ಇದೀಗ ಬಾಲಿವುಡ್ ಖ್ಯಾತ ನಟ ಕಬೀರ್ ಸಿಂಗ್ ಸೇರ್ಪಡೆಗೊಂಡಿದ್ದಾರೆ. ಕಬೀರ್ ಸಿಂಗ್ ಅವರು ಈಗಾಗಲೇ ದಕ್ಷಿಣ ಭಾರತದ ಅನೇಕ ಸಿನಿಮಾಗಳಲ್ಲಿ ಖಳ ನಟರಾಗಿ ಮಿಂಚಿದ್ದಾರೆ. ಹಿಂದಿ ಸಿನಿಮಾಗಳಲ್ಲಿ ಮಾತ್ರ ಅಲ್ಲದೇ ವೆಬ್ ಸೀರಿಸ್ ನಲ್ಲಿಯೂ ಕೂಡ ಕಬೀರ್ ಸಿಂಗ್ ಮಿಂಚಿದ್ದಾರೆ.

ಇತ್ತೀಚೆಗೆ ಕಬೀರ್ ಸಿಂಗ್ ಅವರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಅದ್ರಂತೆ ಇದೀಗ ಕನ್ನಡದ ಗಜರಾಮ ಸಿನಿಮಾದಲ್ಲಿಯೂ ಕೂಡ ಒಂದೊಳ್ಳೆ ಖಳ ಪಾತ್ರ ಸಿಕ್ಕಿದ್ದು, ಈ ಸಿನಿಮಾದ ಬಗ್ಗೆ ಕಬೀರ್ ಸಿಂಗ್ ಅವರಿಗೆ ಭಾರಿ ನಿರೀಕ್ಷೆ ಇದೆಯಂತೆ. ಇನ್ನು ನಟ ರಾಜವರ್ಧನ್ ಅವರು ಬಿಚ್ಚುಗತ್ತಿ ಸಿನಿಮಾದ ನಂತರ ಹಿರಣ್ಯ ಅನ್ನೋ ಸಿನಿಮಾ ಮತ್ತು ಗಜರಾಮ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಗಜರಾಮ ಸಿನಿಮಾದಲ್ಲಿ ರಾಜವರ್ಧನ್ ಅವರಿಗೆ ಜೋಡಿಯಾಗಿ ತಪಸ್ವಿನಿ ಪೂಣಚ್ಚ ಕಾಣಿಸಿಕೊಂಡಿದ್ದಾರೆ. ಈ ಗಜರಾಮ ಸಿನಿಮಾಗೆ ಯೋಗರಾಜ್ ಭಟ್ ಮತ್ತು ಸೂರಿ ನಿರ್ದೇಶನದ ಗರಡಿಯಲ್ಲಿ ಪಳಗಿರೋ ಸುನೀಲ್ ಕುಮಾರ್ ಅವರು ಆಕ್ಷನ್ ಕಟ್ ಹೇಳ್ತಿದ್ದಾರೆ. ಲೈಫ್ ಲೈನ್ ಫಿಲಂ ಪ್ರೊಡಕ್ಷನ್ ಬ್ಯಾನರಡಿಯಲ್ಲಿ ನರಸಿಂಹ ಮೂರ್ತಿ, ಮಲ್ಲಿಕಾರ್ಜುನ್ ಕಾಶಿ ಮತ್ತು ಝವೀಯರ್ ಪರ್ನಾಂಡಿಸ್ ಜಂಟಿಯಾಗಿ ಗಜರಾಮ ಸಿನಿಮಾಗೆ ಬಂಡವಾಳ ಹೂಡಿಕೆ ಮಾಡಿದ್ದಾರೆ.