ಕನ್ನಡದ ಬಹು ನಿರೀಕ್ಷಿತ ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆಗೆ ಸುಧಾರಾಣಿ ಅವರು

ಬೆಳ್ಳಿತೆರೆಯಿಂದ ಕಿರುತೆರೆಗೆ ಎಂಟ್ರಿ ಕೊಟ್ಟ ಚಂದನವನದ ಖ್ಯಾತ ನಟಿ ಸುಧಾರಾಣಿ. ಇತ್ತೀಚೆಗೆ ಕನ್ನಡ ಕಿರುತೆರೆಗೆ ಅನೇಕ ಸಿನಿಮಾ ಕಲಾವಿದರು ಪ್ರವೇಶ ಪಡೆಯುತ್ತಿದ್ದಾರೆ. ಅದರಂತೆ ಇದೀಗ 90ರ ದಶಕದಲ್ಲಿ ಕನ್ನಡ ಚಿತ್ರರಂಗವನ್ನಾಳಿದ ನಟಿ ಸುಧಾರಾಣಿ ಅವರು ಕೂಡ ಕಿರುತೆರೆಗೆ ಎಂಟ್ರಿ ಆಗಿದ್ದಾರೆ. ಹೌದು ಜೀ಼ ಕನ್ನಡದಲ್ಲಿ ಪ್ರಸಾರವಾಗಲಿರುವ ಹೊಸ ಧಾರಾವಾಹಿ ಶ್ರೀ ರಸ್ತು ಶುಭಮಸ್ತು ಎಂಬ ಧಾರಾವಾಹಿಯಲ್ಲಿ ನಟಿ ಸುಧಾರಾಣಿ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ ಕಿರುತೆರೆಯ ಜನಪ್ರಿಯ ವಾಹಿನಿಗಳಲ್ಲಿ ಜೀ಼ ಕನ್ನಡ ಕೂಡ ಪ್ರಮುಖವಾದುದು. ಈ ಜೀ಼ ಕನ್ನಡ ವಾಹಿನಿ ಈಗಾಗಲೇ ಜೊತೆ ಜೊತೆಯಲಿ, ಹಿಟ್ಲರ್ ಕಲ್ಯಾಣ, ನಾಗಿಣಿ, ಗಟ್ಟಿಮೇಳ ಅಂತಹ ಸಾಕಷ್ಟು ಜನ ಮೆಚ್ಚುಗೆಯ ಧಾರಾವಾಹಿ ನೀಡುವ ಮೂಲಕ ಕರುನಾಡಿನ ಮನೆ ಮನಗಳಲ್ಲಿ ಅಪಾರ ಜನಪ್ರಿಯತೆ ಪಡೆದುಕೊಂಡಿದೆ.

ಕಿರುತೆರೆ ವೀಕ್ಷಕರು ಕೂಡ ವಾರದ ದಿನಗಳಲ್ಲಿ ಬರುವ ಧಾರಾವಾಹಿ ಮತ್ತು ವಾರಾಂತ್ಯದಲ್ಲಿ ಬರುವ ರಿಯಾಲಿಟಿ ಶೋಗಳನ್ನ ನೋಡುವ ಮೂಲಕ ಜೀ಼ ಕನ್ನಡ ವಾಹಿನಿಗೆ ಪ್ರೋತ್ಸಾಹ ಬೆಂಬಲ ನೀಡುತ್ತಲೇ ಬಂದಿದ್ದಾರೆ. ಅದ್ರಂತೆ ಈಗ ಶ್ರೀ ರಸ್ತು ಶುಭಮಸ್ತು ಎಂಬ ಹೊಸ ಧಾರಾವಾಹಿಗೂ ಕೂಡ ಉತ್ತಮ ರೆಸ್ಪಾನ್ಸ್ ನೀಡಲಿದ್ದಾರೆ ಎಂಬ ಅಭಿಪ್ರಾಯಗಳು ಕೂಡ ಕೇಳಿ ಬಂದಿವೆ. ಯಾಕಂದ್ರೆ ಈಗಾಗಲೇ ಈ ಹೊಸ ಶ್ರೀ ರಸ್ತು ಶುಭಮಸ್ತು ಧಾರಾವಾಹಿಯ ಪ್ರೋಮೋ ಬಿಡುಗಡೆ ಆಗಿದೆ. ಪ್ರೋಮೋದಲ್ಲಿ ನಟಿ ಸುಧಾರಾಣಿ ಅವರು ಗೃಹಿಣಿಯಾಗಿ ತುಳಸಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಇದ್ರಲ್ಲಿ ತುಳಸಿ ಪಾತ್ರದ ಪರಿಚಯವಾಗಿದ್ದು ಹೊರ ಜಗತ್ತನ್ನೆಲ್ಲಾ ಮರೆತು ತನ್ನ ಕುಟುಂಬವೇ ಒಂದು ಪ್ರಪಂಚ ಎಂಬಂತೆ, ಮನೆಯ ಎಲ್ಲಾ ಜವಾಬ್ದಾರಿ ಹೊತ್ತು ಬೆಳಿಗ್ಗೆ ನ್ಯೂಸ್ ಪೇಪರ್ ನೀಡೋದ್ರಿಂದ, ಮಗನ ಶೂ ಪಾಲಿಶ್ ಮಾಡೋವರೆಗೆ ಗೃಹಿಣಿಯಾಗಿ ತುಳಸಿ ಮಾಡೋ ಎಲ್ಲಾ ಕೆಲಸದ ಸನ್ನಿವೇಶಗಳನ್ನ ತೋರಿಸಲಾಗಿದೆ. ಇಲ್ಲಿ ನಟಿ ಸುಧಾರಾಣಿ ಅವರು ಧಾರಾವಾಹಿಯ ಕಥಾ ನಾಯಕನ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ. ಮಗನ ಪಾತ್ರದಲ್ಲಿ ನಮ್ಮನೆ ಯುವರಾಣಿ ಧಾರಾವಾಹಿ ಅನಿ ಖ್ಯಾತಿಯ ನಟ ದೀಪಕ್ ಕಾಣಿಸಿಕೊಂಡಿದ್ದಾರೆ. ಪ್ರೋಮೋ ನೀಡಿದ ಕಿರುತೆರೆ ವೀಕ್ಷಕರು ಮನ ಮೆಚ್ಚಿದ ಹುಡುಗಿ ಈಗ ಅಮ್ಮನಾಗಿ ಬರುತ್ತಿರೋ ಸುಧಾರಾಣಿ ಅವರನ್ನ ತಮ್ಮ ಮನೆಯ ಟಿವಿಯಲ್ಲಿ ಕಣ್ತುಂಬಿಕೊಳ್ಳಲು ಕಾತುರದಲ್ಲಿದ್ದಾರೆ.