ಕನ್ನಡ ರಾಜ್ಯೋತ್ಸವ ದಿನದಂದು ಪುನೀತ್ ರಾಜ್‍ಕುಮಾರ್ ಅವರಿಗೆ ಪ್ರತಿಷ್ಠಿತ ‘ಕರ್ನಾಟಕ ರತ್ನ’ ಪ್ರಶಸ್ತಿ

ಕನ್ನಡ ಚಿತ್ರರಂಗದ ಧೃವತಾರೆ ಪುನೀತ್ ರಾಜ್ ಕುಮಾರ್ ಅವರಿಗೆ ನವೆಂಬರ್1 ಕರ್ನಾಟಕ ರಾಜ್ಯೋತ್ಸವ ದಿನದಂದು ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಸರ್ಕಾರ ಸಕಲ ಸಿದ್ದತೆ ಮಾಡಿಕೊಳ್ಳುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ. ನಟ ಪುನೀತ್ ರಾಜ್ ಕುಮಾರ್ ಅವರು ನಾಡಿನ ಅಸಂಖ್ಯಾತ ಅಭಿಮಾನಿಗಳನ್ನ ಅಗಲಿ ಹತ್ತು ತಿಂಗಳಾಗುತ್ತಿದೆ. ಆದರೂ ಕೂಡ ಅವರನ್ನ ನೆನೆಯದ ದಿನವಿಲ್ಲ‌. ಅಪ್ಪು ಅವರನ್ನ ಸ್ಮರಿಸದೇ ಆರಂಭವಾಗುವ ಕಾರ್ಯಕ್ರಮಗಳಿಲ್ಲ‌. ಯಾವುದೇ ಸಿನಿಮಾ ಆರಂಭವಾಗುವುದಕ್ಕೆ ಮುನ್ನ ನಗುವಿನ ರಾಜಕುಮಾರನ ಭಾವ ಚಿತ್ರ ನಮನ ಇಲ್ಲದೆ ಆರಂಭವಾಗುವುದಿಲ್ಲ. ಪ್ರತಿ ದಿನ ಒಂದಲ್ಲ ಒಂದು ರೀತಿಯಲ್ಲಿ ಅಪ್ಪು ಅವರು ಕಾಡುತ್ತಲೇ ಇರುತ್ತಾರೆ.

ಪುನೀತ್ ಅವರ ಸಿನಿಮಾಗಳು ಹೊಂದಿದ್ದ ಸಾಮಾಜಿಕ, ಕೌಟುಂಬಿಕ ಮೌಲ್ಯಗಳು ಮತ್ತು ಅವರು ತಮ್ಮ ಜೀವನದಲ್ಲಿ ನಡೆದುಕೊಂಡ ಆದರ್ಶ ವ್ಯಕ್ತಿತ್ವ ನಡೆ-ನುಡಿಗೆ ಇಡೀ ದೇಶವೇ ಮೆಚ್ಚಿ ಕೊಂಡಾಡುತ್ತಿದೆ. ಅವರು ಯಾರಿಗೂ ಕೂಡ ತಿಳಿಸದೇ ಮಾಡಿದಂತಹ ಸಾಮಾಜಿಕ ಸೇವಾ ಕಾರ್ಯಗಳು ನಿಜಕ್ಕೂ ಕೂಡ ಪ್ರತಿಯೊಬ್ಬರಿಗೂ ಆದರ್ಶಮಯ ಅಂತಾನೇ ಹೇಳಬಹುದು. ಹಾಗಾಗಿ ಸರ್ಕಾರ ಕೂಡ ಅವರ ಕಲಾ ಸೇವೆ ಮತ್ತು ಸಾಮಾಜಿಕ ಸೇವೆಗಳನ್ನ ಪರಿಗಣಿಸಿ ಅಪ್ಪು ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಾಗಿ ಘೋಷಣೆ ಮಾಡಿತ್ತು. ಅದದಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇತ್ತೀಚೆಗೆ ಲಾಲ್ ಬಾಗ್ ನಲ್ಲಿ ನಡೆದ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ.

ಅಪ್ಪು ಪ್ರತಿಮೆಗೆ ನಮಸ್ಕರಿಸಿದ ನಂತರ ಮಾಧ್ಯಮದವರೊಂದಿಗೆ ಪುನೀತ್ ರಾಜ್ ಕುಮಾರ್ ಅವರಿಗೆ ನವೆಂಬರ್1 ಕನ್ನಡ ರಾಜ್ಯೋತ್ಸವ ದಿನದಂದು ಕರ್ನಾಟಕ ರತ್ನ ಪ್ರಶಸ್ತಿ ನೀಡಲು ನಾವು ತೀರ್ಮಾನ ಮಾಡಿದ್ದು, ಸರ್ಕಾರ ಸಕಲ ಸಿದ್ದತೆ ಮಾಡಿಕೊಳ್ಳುತ್ತಿದೆ. ಮರಣೋತ್ತರವಾಗಿ ನೀಡುತ್ತಿರುವ ಈ ಪ್ರಶಸ್ತಿ ಸಮಿತಿಯಲ್ಲಿ ರಾಜ್ ಕುಮಾರ್ ಕುಟುಂಬ ಕೂಡ ಸದಸ್ಯರಾಗಿರುತ್ತಾರೆ ಎಂದು ತಿಳಿಸಿದ್ದಾರೆ. ಇನ್ನು ಲಾಲ್ ಬಾಗ್ ಫಲಪುಷ್ಪ ಪ್ರದರ್ಶನದಲ್ಲಿ ರಾಜ್ ಕುಮಾರ್, ಪಾರ್ವತಮ್ಮ ಮತ್ತು ಪುನೀತ್ ರಾಜ್ ಕುಮಾರ್ ಅವರ ಪ್ರತಿಮೆ ವಿಶೇಷವಾಗಿ ಗಮನ ಸೆಳೆದಿತ್ತು. ಈ ಕಾರ್ಯಕ್ರಮಕ್ಕೆ ಶಿವರಾಜ್ ಕುಮಾರ್ ಮತ್ತು ಪತ್ನಿ ಗೀತಾ ಶಿವರಾಜ್ ಕುಮಾರ್ ಕೂಡ ಭಾಗವಹಿಸಿದ್ದರು. ಒಟ್ಟಾರೆಯಾಗಿ ಅಪ್ಪು ಅವರಿಗೆ ನವೆಂಬರ್ 1ರಂದು ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿರುವುದು ನಾಡಿನಾದ್ಯಂತ ಅವರ ಅಭಿಮಾನಿಗಳಿಗೆ ಸಂಭ್ರಮ ಮನೆ ಮಾಡಿದೆ.

Leave a Reply

%d bloggers like this: