ಕನ್ನಡ ಚಿತ್ರದಲ್ಲಿ ನಾಯಕ ನಟನಾದ ಖ್ಯಾತ ನಟ ಸೋನು ಸೂದ್ ಅವರು

ಇಂಡಿಯನ್ ರಿಯಲ್ ಹೀರೋ ಅನಿಸಿಕೊಳ್ಳೋ ಬಾಲಿವುಡ್ ಖ್ಯಾತ ನಟ ಸೋನುಸೂದ್ ಕನ್ನಡದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ನಾಯಕ ನಟರಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಹೆಸರು ಶ್ರೀಮಂತ. ಈ ಶ್ರೀಮಂತ ಚಿತ್ರದ ಕಥಾವಸ್ತು ರೈತರ ದೈನಂದಿನ ಬದುಕು ಬವಣೆಯನ್ನ ತೋರಿಸೋದರ ಜೊತೆಗೆ ಆಧುನಿಕ ಜಗತ್ತಿನಲ್ಲಿ ಮರೆಯಾಗುತ್ತಿರೋ ಹಳ್ಳಿಗಳಲ್ಲಿನ ಹಬ್ಬ ಆಚರಣೆಗಳು ಗ್ರಾಮೀಣ ಕಲೆಗಳ ಸಂಭ್ರಮವನ್ನ ಮತ್ತೆ ಮರುಕಳಿಸುವಂತೆ ಆಗಲು ಪ್ರಯತ್ನ ಈ ಶ್ರೀ ಮಂತ ಚಿತ್ರದಲ್ಲಿ ಮಾಡಲಾಗಿದೆಯಂತೆ. ಅದರ ಜೊತೆಗೆ ಪ್ರಮುಖವಾಗಿ ಈ ಜಗತ್ತಿನಲ್ಲಿ ನಿಜವಾದ ಅತ್ಯಂತ ಶ್ರೀಮಂತ ವ್ಯಕ್ತಿ ರೈತ ಅನ್ನೋದನ್ನ ಶ್ರೀ ಮಂತ ಸಿನಿಮಾ ನಿರೂಪಿಸುವುದಕ್ಕೆ ಹೊರಟಿದೆ. ಶ್ರೀ ಮಂತ ಸಿನಿಮಾದಲ್ಲಿ ನಾಯಕ ನಟರಾಗಿ ಸೋನು ಸೂದ್ ನಟಿಸುತ್ತಿದ್ದಾರೆ.

ಸೋನು ಸೂದ್ ಅವರಿಗೆ ಜೋಡಿಯಾಗಿ ಬಾಂಬೆ ಬೆಡಗಿ ವೈಷ್ಣವಿ ಪಟವರ್ಧನ್ ಮತ್ತು ಮತ್ತೊಬ್ಬ ನಟಿಯಾಗಿ ವೈಷ್ಣವಿ ಚಂದ್ರನ್ ಕಾಣಿಸಿಕೊಂಡಿದ್ದಾರೆ. ತಾರಾಗಣದಲ್ಲಿ ಹಿರಿಯ ನಟ ರಮೇಶ್ ಭಟ್, ರಾಜು ತಾಳಿಕೋಟೆ, ಚರಣ್ ರಾಜ್, ಸಾಧುಕೋಕಿಲ, ಕಲ್ಯಾಣಿ, ಗಿರಿ, ಕುರಿಬಾಂಡ್ ರಂಗ ಸೇರಿದಂತೆ ಇನ್ನಿತರೆ ಕಲಾವಿದರು ಇದ್ದಾರೆ. ಪ್ರಮುಖವಾಗಿ ಶ್ರೀ ಮಂತ ಸಿನಿಮಾದ ವಿಶೇಷ ಅಂದರೆ ಈ ಚಿತ್ರಕ್ಕೆ ನಾದ ಬ್ರಹ್ಮ ಹಂಸಲೇಖ ಅವರು ಸಾಹಿತ್ಯ ಮತ್ತು ಸಂಗೀತ ನಿರ್ದೇಶನ ಮಾಡಿದ್ದಾರೆ. ಗಾನ ಗಂಧರ್ವ ಎಸ್.ಪಿ.ಬಾಲ ಸುಬ್ರಮಣ್ಯಂ ಅವರು ರೈತ ಗೀತೆಯೊಂದನ್ನ ಹಾಡಿದ್ದಾರೆ. ಈ ಹಾಡು ಅದ್ಭುತವಾಗಿ ಮೂಡಿ ಬಂದಿದ್ದು, ಇನ್ಮುಂದೆ ರೈತ ಗೀತೆಗಳಲ್ಲಿ ಶ್ರೀಮಂತ ಸಿನಿಮಾದ ಈ ಹಾಡು ಕೂಡ ಸೇರ್ಪಡೆಗೊಂಡರೂ ಅಚ್ಚರಿ ಇಲ್ಲ ಅಂತ ಹೇಳ್ಬೋದು. ಅದೇ ರೀತಿಯಾಗಿ ನವೀನ್ ಸಜ್ಜು, ವಿಜಯ್ ಪ್ರಕಾಶ್, ಸರಿಗಮಪ ಖ್ಯಾತಿಯ ಅಂಕಿತಾ ಕುಂಡು ಅವರ ಗಾಯನ ಕೂಡ ಶ್ರೀಮಂತ ಸಿನಿಮಾಗಿದೆ.

ಕೆಎಂ ಪ್ರಕಾಶ್ ಸಂಕಲನ, ಮಾಸ್ ಮಾದ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ. ಶ್ರೀ ಮಂತ ಸಿನಿಮಾದ ನಿರ್ದೇಶಕರಾದ ಹಾಸನ್ ರಮೇಶ್ ಅವರು ರಾಜಾಹುಲಿ ಸೇರಿದಂತೆ ಒಂದಷ್ಟು ಸಿನಿಮಾಗಳಿಗೆ ಕಥೆ, ಚಿತ್ರಕಥೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿ ಅನುಭವ ಪಡೆದು ಇದೀಗ ಶ್ರೀ ಮಂತ ಸಿನಿಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ನಿರ್ದೇಶಕರಾದ ಹಾಸನ್ ರಮೇಶ್ ಅವರು ಶ್ರೀ ಮಂತ ಸಿನಿಮಾಗೆ ಕೇವಲ ನಿರ್ದೇಶಕ ಮಾತ್ರ ಅಲ್ಲದೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನ ಕೂಡ ತಾವೇ ಬರೆದಿದ್ದಾರೆ. ಅದರ ಜೊತೆಗೆ ನಿರ್ಮಾಣದಲ್ಲಿಯೂ ಸಹ ತೊಡಗಿಸಿಕೊಂಡಿದ್ದು, ಇವರ ಜೊತೆಗೆ ಜಿ.ನಾರಾಯಣಪ್ಪ, ವಿ.ಸಂಜಯ್ ಬಾಬು ಕೂಡ ಕೈ ಜೋಡಿಸಿದ್ದಾರೆ. ಒಟ್ಟಾರೆಯಾಗಿ ಹಾಸನ್ ರಮೇಶ್ ಅವರು ಬಾಲಿವುಡ್ ನಟ ಸೋನುಸೂದ್ ಅವರನ್ನ ಕನ್ನಡದಲ್ಲಿ ಮೊಟ್ಟ ಬಾರಿಗೆ ನಾಯಕ ನಟರಾಗಿ ಮಾಡಿದ್ದಾರೆ.