ಹೊಸ ರೊಮ್ಯಾಂಟಿಕ್ ಕಾಮಿಡಿ ಕಥೆಯೊಂದಿಗೆ ಹೊಸ ಚಿತ್ರ ತರುತ್ತಿದ್ದಾರೆ ಲವ್ ಮಾಕ್ಟೇಲ್ ಬೆಡಗಿ

ಕನ್ನಡದ ಲವ್ ಮಾಕ್ಟೇಲ್2 ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಜೊತೆ ಮಿಂಚಿದ ನಟಿ ರಚೆಲ್ ಡೇವಿಡ್ ಇದೀಗ ಹೊಸದೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಪ್ರಯೋಗಾತ್ಮಕ ಸಿನಿಮಾಗಳಲ್ಲಿ ಒಂದಾಗಿರುವ ರಾಮಾ ರಾಮಾ ರೇ, ಒಂದಲ್ಲ ಎರಡಲ್ಲ ಸಿನಿಮಾ ಮೂಲಕ ಸೃಜನಶೀಲ ನಿರ್ದೇಶಕರಾಗಿ ಗುರುತಿಸಿಕೊಂಡ ನಿರ್ದೇಶಕ ಸತ್ಯ ಪ್ರಕಾಶ್ ಈ ಹೊಸದೊಂದು ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಸತ್ಯ ಪ್ರಕಾಶ್ ಅವರು ನಿರ್ಮಾಣದ ಜೊತೆಗೆ ಸಿನಿಮಾ ವಿತರಣೆ ಕೆಲಸಗಳಲ್ಲಿಯೂ ಕೂಡ ತೊಡಗಿಸಿಕೊಂಡಿದ್ದಾರೆ.
ಸದಾ ಹೊಸ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಅವಕಾಶ ನೀಡುವ ಸತ್ಯ ಪ್ರಕಾಶ್ ಅವರು ಇದೀಗ ಮತ್ತೊಬ್ಬ ನವ ನಟನಿಗೆ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದ ನಾಯಕ ನಟರಾಗಿ ಮಿಲಿಂದ್ ಎಂಬುವವರು ನಟಿಸುತ್ತಿದ್ದಾರೆ.

ನಟ ಮಿಲಿಂದ್ ಅವರು 2018ರಲ್ಲಿ ತೆರೆಕಂಡ ಅನಂತ್ ನಾಗ್ ಅಭಿನಯದ ವೀಕೆಂಡ್ ಸಿನಿಮಾದಲ್ಲಿ ನಟಿಸಿದ್ದರು. ಇದೇ ಚೊಚ್ಚಲ ಬಾರಿಗೆ ನಟ ಮಿಲಿಂದ್ ಅವರು ಸಂಪೂರ್ಣ ನಾಯಕ ನಟರಾಗಿ ನಟಿಸುತ್ತಿದ್ದಾರೆ. ಇದು ಅವರಿಗೆ ಎರಡನೇ ಸಿನಿಮಾವಾಗಿದೆ. ನಟ ಮಿಲಿಂದ್ ಅವರು ಈಗಾಗಲೇ ಪಾತ್ರಕ್ಕೆ ಭರ್ಜರಿಯಾಗಿ ತಯಾರಿ ನಡೆಸುತ್ತಿದ್ದಾರೆ. ಮಿಲಿಂದ್ ಅವರಿಗೆ ಜೋಡಿಯಾಗಿ ಲವ್ ಮಾಕ್ಟೈಲ್2 ಸಿನಿಮಾ ಖ್ಯಾತಿಯ ರಚೆಲ್ ಡೇವಿಡ್ ಅವರು ನಟಿಸುತ್ತಿದ್ದಾರೆ. ತಮ್ಮ ಮೊದಲ ಸಿನಿಮಾದಲ್ಲಿಯೇ ನಟಿ ರಚೆಲ್ ಅವರು ತಮ್ಮ ಮನೋಜ್ಞ ನಟನೆಯ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಈ ಚಿತ್ರದ ನಂತರ ರಚೆಲ್ ಅವರಿಗೆ ಒಂದಷ್ಟು ಅಭಿಮಾನಿ ಬಳಗ ಕೂಡ ಹುಟ್ಟಿಕೊಂಡಿತು. ಇನ್ನು ನಿರ್ದೇಶಕ ಸತ್ಯ ಪ್ರಕಾಶ್ ಅವರು ಇತ್ತೀಚೆಗೆ ನಿರ್ದೇಶನ ಮಾಡಿದ ಮ್ಯಾನ್ ಆಫ್ ದಿ ಮ್ಯಾಚ್ ಸಿನಿಮಾ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ವಿಮರ್ಶೆ ಪಡೆದುಕೊಂಡಿತ್ತು.

ಈ ಚಿತ್ರವನ್ನು ನಿರ್ದೇಶನದ ಜೊತೆ ನಿರ್ಮಾಪಕ ಮಂಜುನಾಥ್ ಜೊತೆಗೂಡಿ ಸತ್ಯ ಹಾಗೂ ಮಯೂರ ಪಿಕ್ಚರ್ಸ್ ಬ್ಯಾನರ್ ನಡಿ ನಿರ್ಮಾಣ ಕೂಡ ಮಾಡಿದ್ದರು. ಇದೀಗ ಮತ್ತೊಂದು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದು, ಈ ಚಿತ್ರಕ್ಕೂ ಕೂಡ ಮಯೂರ ಪಿಕ್ಚರ್ಸ್ ಡಿ.ಮಂಜುನಾಥ್ ಕೈ ಜೋಡಿಸಿದ್ದಾರೆ. ಈ ನೂತನ ಚಿತ್ರದ ಟೈಟಲ್ ಹಾಗೂ ನಾಯಕ ಮಿಲಿಂದ್, ನಾಯಕಿ ರಚೆಲ್ ಡೇವಿಡ್ ಪಾತ್ರದ ಬಗ್ಗೆ ಸದ್ಯದಲ್ಲೇ ಮಾಹಿತಿ ಹಂಚಿಕೊಳ್ಳಲಿದ್ದಾರಂತೆ. ದೀಪಕ್ ಮಧುವನಹಳ್ಳಿ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಸತ್ಯ ಪ್ರಕಾಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ಮಾಣ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಭಾಗ್ಯರಾಜ್, ರಾಜು ಜೇಮ್ಸ್ ಬಾಂಡ್, ಕಳ್ಬೆಟ್ಟದ ದರೋಡೆಕೋರರು ಸಿನಿಮಾ ನಿರ್ದೇಶಿಸಿರುವ ದೀಪಕ್ ಮಧುವನಹಳ್ಳಿ ನಾಲ್ಕನೇ ಸಿನಿಮಾವಿದು. ರೋಮ್ಯಾಂಟಿಕ್ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಅನೂಪ್ ಸೀಳಿನ್ ರಾಗ ಸಂಯೋಜನೆ ಮಾಡಿದ್ದು, ಲವಿತ್ ಕ್ಯಾಮೆರಾ ವರ್ಕ್, ಅಜಯ್ ಸಂಕಲನ ಕೆಲಸ ಮಾಡುತ್ತಿದ್ದಾರೆ.