ಹೊಸ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ಮತ್ತೊಬ್ಬ ಜನಪ್ರಿಯ ಬಿಗ್ ಬಾಸ್ ಸ್ಪರ್ಧಿ

ಕನ್ನಡ ಕಿರುತೆರೆಯ ಜನಪ್ರಿಯ ವಾಹಿನಿ ಕಲರ್ಸ್ ಕನ್ನಡದಲ್ಲಿ ಹೊಸದೊಂದು ಧಾರಾವಾಹಿ ಇದೇ ಅಕ್ಟೋಬರ್ 10ರಿಂದ ಪ್ರತಿ ದಿನ ಸಂಜೆ 7ಗಂಟೆಗೆ ಆರಂಭಗೊಳ್ಳುತ್ತದೆ. ಇತ್ತೀಚೆಗೆ ಬಿಗ್ ಬಾಸ್ ಸೀಸನ್9 ರಿಯಾಲಿಟಿ ಶೋಗಾಗಿ ಒಂದಷ್ಟು ಧಾರಾವಾಹಿಗಳು ಅಂತ್ಯಗೊಂಡಿದ್ದವು. ಇದೀಗ ಕಲರ್ಸ್ ಕನ್ನಡ ಕುಟುಂಬಕ್ಕೆ ಹೊಸದೊಂದು ಕುಟುಂಬಕ್ಕೆ ಸೇರ್ಪಡೆಗೊಳ್ಳುತ್ತಿದೆ. ಈ ಕುಟುಂಬದ ಹೆಸರು ಭಾಗ್ಯ ಲಕ್ಷ್ಮೀ. ಈಗಾಗಲೇ ಭಾಗ್ಯಲಕ್ಷ್ಮೀ ಧಾರಾವಾಹಿಯ ಪ್ರೋಮೋ ಪ್ರಸಾರವಾಗಿದ್ದು, ವೀಕ್ಷಕರಿಗೆ ಭಾರಿ ಕುತೂಹಲ ಹುಟ್ಟಿಸಿದೆ. ಈ ಧಾರಾವಾಹಿ ಕಥಾಹಂದರದ ಒಂದು ಎಳೆ ಈಗಾಗಲೇ ವೀಕ್ಷಕರಿಗೆ ಗೊತ್ತಾಗಿದ್ದು, ಈ ಭಾಗ್ಯಲಕ್ಷ್ಮೀ ಧಾರಾವಾಹಿ ಯಾವ ರೀತಿ ಇರಲಿದೆ ಎಂದು ಕಾತುರದಲ್ಲಿರಿಸಿದೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಈಗಾಗಲೇ ಕನ್ನಡತಿ, ಗೀತಾ, ರಾಮಾಚಾರಿ, ಒಲವಿನ ನಿಲ್ದಾಣ ಅಂತಹ ಸದಭಿರುಚಿಯ ಧಾರಾವಾಹಿಗಳು ನಾಡಿನ ಮನೆಮನಗಳಲ್ಲಿ ಅಪಾರ ಜನಪ್ರಿಯತೆ ಪಡೆದಿವೆ. ಅದರಂತೆ ಇದೀಗ ಜೈ ಮಾತಾ ಕಂಬೈನ್ಸ್ ಅವರ ಭಾಗ್ಯಲಕ್ಷ್ಮೀ ಅನ್ನೋ ಹೊಸ ಧಾರಾವಾಹಿ ಕೂಡ ಅದರ ಸಾಲಿಗೆ ಸೇರೋ ಸೂಚನೆ ನೀಡಿದೆ. ಈ ಭಾಗ್ಯಲಕ್ಷ್ಮೀ ಧಾರಾವಾಹಿಯು ಅಕ್ಕತಂಗಿಯ ಬಾಂದವ್ಯದ ಕಥೆ ಹೊಂದಿದೆ. ಪ್ರಧಾನ ಪಾತ್ರದಲ್ಲಿ ನಟಿ ಕಮ್ ನಿರೂಪಕಿ ಸುಷ್ಮಾ ಅವರು ನಟಿಸುತ್ತಿದ್ದು, ಬಿಗ್ ಬಾಸ್ ಖ್ಯಾತಿಯ ನಟ ಶಮಂತ್ ಗೌಡ(ಬ್ರೋ ಗೌಡ), ಪದ್ಮಜಾ ರಾವ್, ಸುದರ್ಶನ್, ಭೂಮಿಕ, ತಾಂಡವ ಸೂರ್ಯವಂಶಿ ಸೇರಿದಂತೆ ಬಹುದೊಡ್ಡ ತಾರಾಗಣ ಈ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿದೆ. ಆಲ್ಬಂ ಸಾಂಗ್, ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಗಮನ ಸೆಳೆದಿರೋ ಶಮಂತ್ ಬ್ರೋ ಗೌಡ ಇದೇ ಮೊದಲ ಬಾರಿಗೆ ಕಿರುತೆರೆಯಲ್ಲಿ ಕಾಣಿಸಿಕೊಳ್ತಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಟಿ ಸುಷ್ಮಾ ಅವರು ಬಹಳ ವರ್ಷಗಳ ನಂತರ ಕಿರುತೆರೆಗೆ ಮರಳುತ್ತಿದ್ದೇನೆ. ಕಥೆ ನನಗೆ ತುಂಬಾ ಇಷ್ಟವಾಯ್ತು. ಈ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ನನ್ನ ಪಾತ್ರ ಬದುಕಿನಲ್ಲಿ ಏನೇ ಬಂದರು ಅದನ್ನ ಖುಷಿಯಾಗಿ ಸ್ವೀಕರಸಿ ತನ್ನ ಜೊತೆಗೆ ಇರೋರನ್ನ ಖುಷಿಯಾಗಿ ಇರಿಸಿಕೊಳ್ಳೋ ಒಂದು ಉತ್ತಮ ಪಾತ್ರವಾಗಿದೆ. ತನ್ನ ಇಡೀ ಕುಟುಂಬದ ಜವಾಬ್ದಾರಿಯನ್ನ ಹೊತ್ತು ತನ್ನ ಬದುಕನ್ನ ತಂಗಿ ಮತ್ತು ಮನೆಯವರಿಗಾಗಿ ಮುಡಿಪಾಗಿಟ್ಟಿರೋ ಒಂದು ಜವಾಬ್ದಾರಿ ಅಕ್ಕನ ಪಾತ್ರ. ನನಗೆ ಈ ಪಾತ್ರ ಮಾಡಲು ತುಂಬಾ ಖುಷಿ ಇದೆ. ಹಾಗಾಗಿ ಈ ಭಾಗ್ಯಲಕ್ಷ್ಮೀ ಧಾರಾವಾಹಿ ಒಪ್ಪಿಕೊಂಡೆ ಎಂದು ಕಥಾ ನಾಯಕಿ ನಟಿ ಸುಷ್ಮಾ ಅವರು ತಿಳಿಸಿದ್ದಾರೆ. ಕೌಟುಂಬಿಕ ಭಾಂಧವ್ಯದ ಮಹತ್ವವನ್ನ ತಿಳಿಸೋ ಧಾರಾವಾಹಿಯಾಗಿ ಭಾಗ್ಯಲಕ್ಷ್ಮೀ ಧಾರಾವಾಹಿ ಮೂಡಿಬಂದಿದ್ದು, ಇದೇ ಅಕ್ಟೋಬರ್ 10ರಿಂದ ಪ್ರತಿದಿನ ಸಂಜೆ 7 ಗಂಟೆಗೆ ಪ್ರಸಾರವಾಗಲಿದೆ.