ಹಸಿವನ್ನು ತಾಳಲಾರದೆ ಸಾಯಲು ಹೊರಟಿದ್ದ ಸಾಧು ಕೋಕಿಲ ಕಣ್ಣೀರಿನ ಕಥೆ

ಹಸಿವನ್ನು ತಾಳಲಾರದೆ ಸಾಯಲು ಹೊರಟಿದ್ದ ಇವರು ಇಂದು ಕನ್ನಡ ಚಿತ್ರರಂಗದ ಹಾಸ್ಯ ಚಕ್ರವರ್ತಿಯಾಗಿ ಮಿಂಚುತ್ತಿದ್ದಾರೆ. ಪ್ರತಿಯೊಬ್ಬರಿಗೂ ಕೂಡ ಈ ಬದುಕಿನಲ್ಲಿ ತಿರುವು ಎಂಬುದು ಇದ್ದೇ ಇರುತ್ತದೆ.ಕೆಟ್ಟ ಘಳಿಗೆ ಸಂಕಷ್ಟವನ್ನು ತಂದೊಡ್ಡಿ ಒಂದೊತ್ತು ಊಟಕ್ಕೂ ಕೂಡ ಕಷ್ಟಕರವಾಗಿರುತ್ತಿದೆ.ಇಂತಹ ಸಂಧರ್ಭದಲ್ಲಿ ಮನುಷ್ಯನಿಗೆ ತಾಳ್ಮೆ ಸಂಯಮ ಮುಖ್ಯ.ಆದರೆ ಮನುಷ್ಯನಿಗೆ ಆ ಸಂಧರ್ಭದಲ್ಲಿ ಅನುಭವಿಸಲಾಗದ ನೋವು,ಅವಮಾನ ಆ ವ್ಯಕ್ತಿಯನ್ನ ಖಿನ್ನತೆಗೆ ತಳ್ಳಿ ಸಾವಿಗೂ ಶರಣಾಗುವಂತಹ ಪರಿಸ್ಥಿತಿ ನಿರ್ಮಾಣ ಮಾಡಿಬಿಡುತ್ತದೆ.ಅಂತೆಯೇ ಇಂತಹ ಕಷ್ಟದ ದಿನಗಳನ್ನು ಎದುರಿಸಿ ಇಂದು ನಾಡಿನಾದ್ಯಂತ ಅಪಾರ ಜನಪ್ರಿಯ ಹಾಸ್ಯ ನಟ,ನಿರ್ದೇಶಕ ಸಂಗೀತ ನಿರ್ದೇಶಕರಾಗಿ ಮನೆ ಮಾತಾಗಿರುವ ಸಾಧುಕೋಕಿಲ ನಮಗೆ ಮಾದರಿ ಸ್ಪೂರ್ತಿದಾಯಕ ವ್ಯಕ್ತಿಯಾಗಿದ್ದಾರೆ.ಮೂಲತಃ ಸಂಗೀತ ಹಿನ್ನೆಲೆಯುಳ್ಳ ಕುಟುಂಬದಲ್ಲಿ ಬಂದ ಸಾಧುಕೋಕಿಲ ಅವರು ಕ್ರಿಶ್ಚಿಯನ್ ಧರ್ಮದವರಾಗಿದ್ದಾರೆ. ಇವರಿಗೆ ಉಷಾ ಕೋಕಿಲ ಮತ್ತು ಲಯನೇಂದ್ರ ಎಂಬ ಸೋದರ ಸೋದಿರಿ ಇದ್ದಾರೆ.

ಇವರು ಆರ್ಕೆಸ್ಟ್ರಾದಲ್ಲಿ ಹಾಡು ಹಾಡಿ ಬದುಕು ಕಟ್ಟಿಕೊಳ್ಳುತ್ತಿದ್ದ ಇವರಿಗೆ ಒಂದೊತ್ತಿನ ಊಟಕ್ಕೂ ಕೂಡ ಕಷ್ಟವಿತ್ತು. ಬೆಂಗಳೂರಿನ ಸೆಂಟ್ ಜೋಸೆಫ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಇವರಿಗೆ ಮಧ್ಯಾಹ್ನದ ಊಟಕ್ಕೆ ಇವರ ತಾಯಿ ನಾಕಾರು ಕಿ.ಮಿ.ದೂರ ನಡೆದುಕೊಂಡು ಬಂದು ಹಣ್ಣು ಹಂಪಲು ನೀಡಿ ಹೊಟ್ಟೆ ತುಂಬಿಸುತ್ತಿದ್ದರಂತೆ.ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದ ಕಾರಣ ವಿಧ್ಯಾಭ್ಯಾಸವನ್ನು 8 ನೇ ತರಗತಿಗೆ ಮೊಟಕುಗೊಳಿಸಿ ಸಾಧುಕೋಕಿಲ ಅವರು ಕಸ್ತೂರಿ ಶಂಕರ್ ರಾವ್ ಅವರ ವಾದ್ಯದ ಪರಿಕರಗಳ ಅಂಗಡಿಯಲ್ಲಿ ಕೆಲಸ ಮಾಡಲು ಆರಂಭಿಸುತ್ತಾರೆ.ಇಲ್ಲಿ ವಾದ್ಯಗಳನ್ನ ಸ್ವಚ್ಚಗೊಳಿಸುವ ಸಮಯದಲ್ಲಿ ಕೋಕಿಲ ಅವರಿಗೆ ಈ ವಾದ್ಯಗಳ ಬಗ್ಗೆ ಕುತೂಹಲ ಆಸಕ್ತಿ ಬೆಳೆಯುತ್ತದೆ. ಸಂಗೀತದ ಹಿನ್ನೆಲೆಯ ಕುಟುಂಬ ಆದ್ದರಿಂದ ವಾದ್ಯಗಳ ಪರಿಚಯ ಇತ್ತಾದರು ಅವುಗಳನ್ನು ನುಡಿಸುವ ಕಲೆಯ ಅಷ್ಟಾಗಿ ತಿಳಿಯದ ಕೋಕಿಲ ಅವರು ಮೋಹನ್ ಎಂಬುವವರ ಆರ್ಕೆಸ್ಟ್ರಾದಲ್ಲಿ ಸಹಾಯಕರಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.

ದಿನವೊಂದಕ್ಕೆ ಹತ್ತು ರೂ.ಸಂಬಳ ನೀಡುತ್ತಿದ್ದ ಮೋಹನ್ ಅವರು ಒಂದು ದಿನ ಆರ್ಕೆಸ್ಟ್ರಾದ ಸಂಧರ್ಭದಲ್ಲಿ ಸಾಧುಕೋಕಿಲ ಅವರು ವಾದ್ಯದ ಪರಿಕರಗಳನ್ನು ಸರಿಯಾಗಿ ಜೋಡಿಸಿರಲಿಲ್ಲ ಎಂಬ ಕಾರಣಕ್ಕೆ ಅವರನ್ನ ನೀನು ನಮಗೆ ಕೆಲಸಗಾರನಷ್ಟೇ ದೊಡ್ಡ ಸಂಗೀತ ವಿದ್ವಾಂಸನಂತೆ ವರ್ತಿಸಬೇಡ ಎಂದು ನೋವಾಗುವಂತೆ ಬೈದರಂತೆ.ಅಷ್ಟೇ ಅಲ್ಲದೆ ಸಾಧು ಅವರಿಗೆ ಸಂಬಳ ನೀಡುವ ಬದಲು ಆರ್ಕೆಸ್ಟ್ರಾದ ಒಂದು ಟೀ ಶರ್ಟ್ ಕೊಟ್ಟಾಗ ಇದರಿಂದ ಕೋಪಗೊಂಡ ಸಾಧು ಅವರು ಆ ಟೀ ಶರ್ಟ್ ಅನ್ನು ಅಲ್ಲೇ ವೇದಿಕೆಯಲ್ಲಿಯೇ ತೆಗೆದು ಬಿಸಾಕಿ ಅಲ್ಲಿಂದ ಬರೀ ಮೈಯಲ್ಲಿ ಹೊರ ನಡೆದರಂತೆ. ತದ ನಂತರ ತನ್ನ ಸೋದರ ಲಯನೇಂದ್ರ ಅವರ ಬಳಿ ಬಂದು ನಾನು ಈಗ ಎಲ್ಲಿ ಹೋಗುತ್ತೇನೆ,ಯಾವಾಗ ಬರುತ್ತೇನೆ ಎಂದು ನನಗೆ ತಿಳಿದಿಲ್ಲ ಎಂದು ಮನಿ ಬಿಟ್ಟು ಕಣ್ಣೀರದವಿಟ್ಟು ಹಲಸೂರು ಕೆರೆಯ ಕಡೆಗೆ ನಡೆದು ಹೋಗುತ್ತಿದ್ದಾಗ ಅಂದಿನ ಲುಮೋನ್ ಥಿಯೇಟರ್ ನಲ್ಲಿ ಇಂಗ್ಲೀಷ್ ಪೋಸ್ಟರ್ ಅನ್ನು ನೋಡುತ್ತಾರೆ.

ಸಾಯುವ ಯೋಚನೆಯಲ್ಲಿದ್ದ ಸಾಧು ಅವರಿಗೆ ಈ ಸಿನಿಮಾ ನೋಡಿ ಸಾಯೋಣ ಎಂದೆನಿಸಿ ಚಿತ್ರ ನೋಡುತ್ತಾರೆ.ಈ ಚಿತ್ರದಲ್ಲಿ ಆರಂಭದಿಂದ ಅಂತ್ಯದವರೆಗೆ ಬರೀ ಹಾಸ್ಯವೇ ತುಂಬಿದ ಕಾರಣ ಸಿನಿಮಾ ನೋಡಿ ನಕ್ಕು ನಕ್ಕು ಮನಸ್ಸು ಉಲ್ಲಾಸವಾಗಿದ್ದ ಸಾಧು ಅವರಿಗೆ ತನ್ನ ಎಲ್ಲಾ ನೋವುಗಳು ಮರೆಯಾಗಿದ್ದವಂತೆ. ಬಳಿಕ ಇದ್ದಕಿದ್ದಂತೆ ಮನದಲ್ಲಿ ಒಂದು ನಿಶ್ಚಯ ಮಾಡುತ್ತಾರೆ ನಾನು ಕೂಡ ಒಬ್ಬ ದೊಡ್ಡ ಸಂಗೀತ ನಿರ್ದೇಶಕನಾಗಿ ಸಾಧಿಸಬೇಕು ಎಂದು ಛಲ ಆತ್ಮವಿಶ್ವಾಸ ರೂಢಿಸಿಕೊಳ್ಳುತ್ತಾರೆ.ಕೆಲವು ದಿನಗಳ ನಂತರ ಬೈದಿದ್ದ ಮೋಹನ್ ಅವರೇ ಸಾಧು ಅವರನ್ನ ಕರೆದು ತಮ್ಮ ಆರ್ಕೆಸ್ಟ್ರಾದಲ್ಲಿ ಹಾಡುವ ಅವಕಾಶ ನೀಡುತ್ತಾರಂತೆ.ಅವರ ಪ್ರತಿಭೆ ನೋಡಿದ ಮೋಹನ್ ಅವರು ನೀನು ದೊಡ್ಡ ಮ್ಯುಸಿಷನ್ ಆಗುತ್ತೀಯಾ ಎಂದು ಹೇಳಿ ಪ್ರಶಂಸೆ ಮಾಡುತ್ತಾರಂತೆ.

ಮುಂದೆ ನಾದ ಬ್ರಹ್ಮ ಹಂಸಲೇಖ,ವಿ.ಮನೋಹರ್ ಸೇರಿದಂತೆ ದಿಗ್ಗಜ ಸಂಗೀತ ನಿರ್ದೇಶಕರ ಬಳಿ ಸಾಧು ಅವರು ದುಡಿಯುತ್ತಾರೆ. ಈ ನಡುವೆ ಉಪೇಂದ್ರ ಅವರ ಪರಿಚಯವಾಗಿ ಶ್ ಚಿತ್ರದಲ್ಲಿ ಮ್ಯೂಸಿಕ್ ಮಾಡಲು ಅವಕಾಶ ಪಡೆಯುತ್ತಾರೆ.ಅಷ್ಟೇ ಅಲ್ಲದೆ ಅವರ ಮುಖ ಹೇರ್ ಸ್ಟೈಲ್ ನಿಂದ ವಿಭಿನ್ನವಾಗಿ ಕಾಣುತ್ತಿದ್ದ ಸಾಧು ಅವರಿಗೆ ಶ್ ಚಿತ್ರದಲ್ಲಿ ನಟಿಸುವ ಅವಕಾಶ ಕೂಡ ದೊರೆಯುತ್ತದೆ. ಹೀಗೆ ಸಂಗೀತ,ನಟನೆಗೆ ಕಾಲಿಟ್ಟ ಸಾಧು ಅವರು ನಡೆದು ಬಂದ ದಾರಿ ಈಗ ಇತಿಹಾಸ.ಇಂದು ನಿರ್ದೇಶಕ,ಗಾಯಕ,ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಸಾಧುಕೋಕಿಲ ಅವರು ಕನ್ನಡ ಚಿತ್ರರಂಗದ ನಂಬರ್ ಒನ್ ಹಾಸ್ಯನಟರಾಗಿದ್ದಾರೆ‌.ತೆರೆ ಮೇಲೆ ಇವರು ಕಾಣಿಸಿಕೊಂಡರೆ ಸಾಕು ಸಿನಿ ಪ್ರೇಕ್ಷಕರ ಮೊಗದಲ್ಲಿ ಗೊತ್ತಿಲ್ಲದಂತೆ ನಗು ಉಕ್ಕಿ ಬರುತ್ತದೆ.ಅಷ್ಟರ ಮಟ್ಟಿಗೆ ಅವರು ರಾಜ್ಯದಾದ್ಯಂತ ಅಪಾರ ಜನಪ್ರಿಯ ಹಾಸ್ಯ ನಟರಾಗಿದ್ದಾರೆ.

Leave a Reply

%d bloggers like this: