ಫಿಲಂ ಸಿಟಿ ನಿರ್ಮಿಸೋಕೆ ಸಜ್ಜಾದ ನಿರ್ಮಾಪಕ ಉಮಾಪತಿ ಗೌಡ

ಸ್ಯಾಂಡಲ್ ವುಡ್ ನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ಮಿಸಿರುವ ನಿರ್ಮಾಪಕರೊಬ್ಬರು ಇದೀಗ ಕನ್ನಡ ಚಿತ್ರರಂಗಕ್ಕೆ ಬೃಹತ್ ಕೊಡುಗೆಯೊಂದನ್ನ ನೀಡಲು ಮುಂದಾಗಿದ್ದಾರೆ.ಹೌದು ಕಿಚ್ಚ ಸುದೀಪ್ ನಟನೆಯ ಹೆಬ್ಬುಲಿ ಚಿತ್ರವನ್ನು ನಿರ್ಮಾಣ ಮಾಡುವ ಮೂಲಕ ಗಾಂಧಿನಗರಕ್ಕೆ ಪಾದಾರ್ಪಣೆ ಮಾಡಿದ ಉಮಾಪತಿ ಶ್ರೀನಿವಾಸ್ ಗೌಡ ಇದೀಗ ಚಂದನವನದ ಯಶಸ್ವಿ ನಿರ್ಮಾಪಕರಾಗಿದ್ದಾರೆ.ಕೃಷ್ಣ ನಿರ್ದೇಶನದಲ್ಲಿ ಹೆಬ್ಬುಲಿಯ ಚಿತ್ರದ ಯಶಸ್ಸಿನ ನಂತರ ಡಿ.ಸತ್ಯ ಪ್ರಕಾಶ್ ನಿರ್ದೇಶನದ ಒಂದಲ್ಲಾ ಎರಡಲ್ಲಾ ಸಿನಿಮಾ ನಿರ್ಮಿಸಿದರು. ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿಯು ಕೂಡ ದೊರೆಯಿತು.ಇದಾದ ಬಳಿಕ ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಟ್ಟಿಗೆ ರಾಬರ್ಟ್ ಸಿನಿಮಾ ಮಾಡಿದರು.ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರ ನಿರ್ಮಾಣದ ಈ ರಾಬರ್ಟ್ ಸಿನಿಮಾ ಬಾಕ್ಸ್ ಆಫೀಸ್ ಅಲ್ಲಿ ಭರ್ಜರಿ ಕಲೆಕ್ಷನ್ ಕೂಡ ಮಾಡಿತು.

ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳ ನಿರ್ಮಾಪಕರಾಗಿರುವ ಉಮಾಪತಿ ಸದ್ಯಕ್ಕೆ ರೋರಿಂಗ್ ಸ್ಟಾರ್ ಶ್ರೀ ಮುರುಳಿ ಅವರ ನಾಯಕತ್ವದ ಮದಗಜ ಸಿನಿಮಾ ಹಾಗೂ ಚಿಕ್ಕಣ್ಣ ಅವರ ನಟನೆಯಲ್ಲಿ ಉಪಾಧ್ಯಕ್ಷ ಎಂಬ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.ಮದಗಜ ಚಿತ್ರವನ್ನು ಅಯೋಗ್ಯ ಸಿನಿಮಾ ಖ್ಯಾತಿಯ ನಿರ್ದೇಶಕ ಮಹೇಶ್ ಕುಮಾರ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.ಸಿನಿಮಾ ನಿರ್ಮಾಣದ ಜೊತೆಗೆ ಉಮಾಪತಿ ಅವರು ತಮ್ಮ ಕನಸಿನ ಯೋಜನೆ ಫಿಲಂ ಸಿಟಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ.ಈ ಹಿಂದೆ ನಿರ್ಮಾಪಕ ಉಮಾಪತಿ ಶ್ರೀ ನಿವಾಸ್ ಗೌಡ ಅವರು ನೀಡಿದ ಅನೇಕ ಸಂದರ್ಶನಗಳಲ್ಲಿ ಕರ್ನಾಟಕದಲ್ಲಿ ತಾನೊಂದು ಸುಸುಜ್ಜಿತ ಫಿಲಂ ಸಿಟಿ ನಿರ್ಮಾಣ ಮಾಡಬೇಕು ಎಂಬ ಮಹಾದಾಸೆಯನ್ನ ವ್ಯಕ್ತಪಡಿಸಿದ್ದರು. ಅದರಂತೆ ಇದೀಗ ಈ ಬೃಹತ್ ಯೋಜನೆಗೆ ಕೈ ಹಾಕಿದ್ದಾರೆ.

ದಕ್ಷಿಣ ಭಾರತದ ಸುಪ್ರಸಿದ್ದ ಫಿಲಂ ಸಿಟಿಯಾಗಿರುವ ರಾಮೋಜಿರಾವ್ ಫಿಲಂ ಸಿಟಿ ರೀತಿಯಲ್ಲಿ ಸಾಧ್ಯವಾಗದಿದ್ದರು ತಕ್ಕ ಮಟ್ಟಿಗೆ ಸುಸಜ್ಜಿತವಾದ ಅತ್ಯುತ್ತಮ ತಂತ್ರಜ್ಞಾನದೊಟ್ಟಿಗೆ ಫಿಲಂ ಸಿಟಿಯನ್ನ ನಿರ್ಮಿಸಲು ತಯಾರಿ ಮಾಡಿಕೊಂಡಿದ್ದಾರೆ.ಈ ಫಿಲಂ ಸಿಟಿಯನ್ನು ಕನಕಪುರ ರಸ್ತೆಯಲ್ಲಿ ನಿರ್ಮಾಣ ಮಾಡುವುದಾಗಿದೆ.ಬರೋಬ್ಬರಿ ಮೂವತ್ತು ಎಕರೆ ಪ್ರದೇಶದಲ್ಲಿ ಈ ನೂತನ ಅತ್ಯಾಧುನಿಕ ಫಿಲಂ ಸಿಟಿ ನಿರ್ಮಾಣ ಕಾರ್ಯ ಆರಂಭವಾಗಲಿದೆ.ಈಗಾಗಲೇ ಗುದ್ದಲಿ ಪೂಜೆ ನೆರೆವೇರಿಸಿರುವ ನಿರ್ಮಾಪಕ ಉಮಾಪತಿ ಅದಕ್ಕೆ ಬೇಕಾದ ಸಕಲ ಸವಲತ್ತುಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ.ಒಟ್ಟಾರೆಯಾಗಿ ಕರ್ನಾಟಕದಲ್ಲಿ ಫಿಲಂ ಸಿಟಿ ನಿರ್ಮಾಣವಾಗುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಒಂದು ಉತ್ತಮ ಕೊಡುಗೆಯಾಗಲಿದೆ ಎಂದು ಹೇಳಬಹುದು.