ದೊಡ್ಮನೆ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಊಟ ಮಾಡಿದವರ ಸಂಖ್ಯೆ ಎಷ್ಟು ಗೊತ್ತಾ? ಸೇರಿದ ಅಭಿಮಾನಿಗಳ ಸಂಖ್ಯೆ ಎಷ್ಟು ಗೊತ್ತಾ

ಕನ್ನಡ ಚಿತ್ರರಂಗದ ಪ್ರೀತಿಯ ಅಪ್ಪು ನಟ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಡಾ.ರಾಜ್ ಕುಮಾರ್ ಕುಟುಂಬ ಆಯೋಜಿಸಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಬರೋಬ್ಬರಿ ನಲವತ್ತು ಸಾವಿರಕ್ಕೂ ಅತ್ಯಧಿಕ ಅಭಿಮಾನಿಗಳು ಪಾಲ್ಗೊಂಡಿದ್ದರು. ಅಕಾಲಿಕ ನಿಧನ ಹೊಂದಿದ ಪುನೀತ್ ರಾಜ್ ಕುಮಾರ್ ಅವರ ಪುಣ್ಯ ಸ್ಮರಣೆ ಮಂಗಳವಾರ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ ತ್ರಿಪುರ ವಾಸಿನಿಯಲ್ಲಿ ಅಭಿಮಾನಿಗಳಿಗಾಗಿ ಊಟದ ವ್ಯವಸ್ಥೆ ಮಾಡಿದ ಮಂಗಳವಾರ ಪ್ಯಾಲೇಸ್ ಗ್ರೌಂಡ್ ಸಂಪೂರ್ಣ ಅಭಿಮಾನಿಗಳಿಂದ ತುಂಬಿ ತುಳುಕುತಿತ್ತು. ಮೊದಲು ಇಪ್ಪತ್ತು ಸಾವಿರ ಜನಕ್ಕೆ ಮಾಂಸಾಹಾರ ಮತ್ತು ಐದು ಸಾವಿರ ಜನರಿಗೆ ಸಸ್ಯಾಹಾರ ಊಟದ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆದರೆ ತದ ನಂತರ ಮಧ್ಯಾಹ್ನ ಎರಡು ಗಂಟೆಯ ನಂತರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಪುನಃ ಇಪ್ಪತ್ತು ಸಾವಿರ ಜನಕ್ಕಾಗುವಷ್ಟು ಅಡುಗೆ ಮಾಡಲಾಯಿತು. ಈ ಊಟದ ವ್ಯವಸ್ಥೆಯಲ್ಲಿ ಸರಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಬಾಣಸಿಗರು, ಏಳು ನೂರಕ್ಕೂ ಅಧಿಕ ಅಡುಗೆ ಸಹಾಯಕರು ಕೆಲಸ ಮಾಡಿದ್ದಾರೆ.

ಇನ್ನು ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್ ಮಾತನಾಡಿ ಇಡೀ ಭಾರತೀಯ ಚಿತ್ರರಂಗದಲ್ಲಿ ಈ ಪರಿ ಪ್ರಮಾಣದ ಜನರಿಗೆ ಊಟ ನೀಡಿರುವುದು ದೊಡ್ಮನೆ ಮಾತ್ರ. ಆದರೆ ಈ ಅನ್ನಸಂತರ್ಪಣೆ ಕಾರ್ಯಕ್ರಮ ಅಪ್ಪು ಅವರ ಪುಣ್ಯ ಸ್ಮರಣೆಯ ರೂಪದಲ್ಲಿ ಮಾಡುತ್ತಿರುವುದು ನಮಗೆ ಅತೀವ ನೋವನ್ನುಂಟು ಮಾಡಿದೆ ಎಂದು ಹೇಳಿದರು. ಇನ್ನು ಪುನೀತ್ ಅವರ ಪತ್ನಿ ಅಶ್ವಿನಿ ಅವರು ಅಭಿಮಾನಿಗಳಿಗೆ ಊಟ ಬಡಿಸುತ್ತಾ ಭಾವುಕರಾದರು. ಯುವರಾಜ್ ಕುಮಾರ್,ಧೀರೆನ್ ರಾಮ್ ಕುಮಾರ್ ಸೇರಿದಂತೆ ದೊಡ್ಮನೆಯ ಎಲ್ಲರು ಕೂಡ ಅಭಿಮಾನಿಗಳ ಬಳಿ ಊಟ ಹೇಗಿದೆ ಎಂದು ವಿಚಾರಿಸಿಕೊಳ್ಳುತ್ತಿದ್ದರು. ಇನ್ನು ಈ ಅನ್ನ ಸಂತರ್ಪಣೆ ಅಪ್ಪುವಿನ ಆಸೆಯಂತೆಯೇ ಆಗಿದೆ. ನಾಡಿನ ಅಭಿಮಾನಿಗಳು ನಮ್ಮ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿಗೆ ನಾವು ಸದಾ ಚಿರಋಣಿಯಾಗಿರುತ್ತೇವೆ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.

ಇದರ ಜೊತಗೆ ಲಯನ್ಸ್ ಕ್ಲಬ್ ವತಿಯಿಂದ ಆಯೋಜನೆಗೊಂಡಿದ್ದ ರಕ್ತದಾನ ಶಿಬಿರದಲ್ಲಿ ಶಿವಣ್ಣ ರಕ್ತದಾನವನ್ನು ಸಹ ಮಾಡಿದ್ದಾರೆ.ಇತ್ತ ಅಪ್ಪು ಅಗಲಿ ಎರಡು ವಾರಗಳು ಕಳೆದರು ಕೂಡ ಪರಭಾಷಾ ಚಿತ್ರ ನಟ-ನಟಿಯರು ಪುನೀತ್ ಸಮಾಧಿ ಮತ್ತು ದೊಡ್ಮನೆಗೆ ಭೇಟಿ ನೀಡುತ್ತಿದ್ದಾರೆ. ಜೊತೆಗೆ ಅಪ್ಪು ಸಮಾಧಿ ದರ್ಶನ ಮಾಡಲು ರಾಜ್ಯದ ಮೂಲೆ ಮೂಲೆಗಳಿಂದ ಪ್ರತಿ ನಿತ್ಯ ಸಾವಿರಾರು ಮಂದಿ ಬರುತ್ತಿದ್ದಾರೆ.