‘ದಿಲ್ ಖುಷ್’ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಮತ್ತೊಬ್ಬ ಹೊಸ ನಟ

ಸಿಂಪಲ್ ಸುನಿ ಶಿಷ್ಯ ಇದೀಗ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಪಂಚಿಂಗ್ ಅಂಡ್ ಡಬಲ್ ಮೀನಿಂಗ್ ಡೈಲಾಗ್ ಗಳ ಮೂಲಕವೇ ಸಿನಿಮಾ ಗೆಲ್ಲಿಸಿದ ನಿರ್ದೇಶಕ ಸಿಂಪಲ್ ಸುನಿ ಅವರ ಶಿಷ್ಯ ಅಂದಾಕ್ಷಣ ಕೇಳ್ಬೇಕಾ. ಅವರ ಗರಡಿಯಲ್ಲಿ ಪಳಗಿದ ಈ ಯುವ ಪ್ರತಿಭೆ ನಿರ್ದೇಶಕನಿಗೆ ಟ್ಯಾಲೆಂಟ್ ಅಂತೂ ಇದ್ದೇ ಇರುತ್ತೆ. ಅಂದ್ಹಾಗೆ ಈ ಯುವ ನಿರ್ದೇಶಕನ ಹೆಸರು ಪ್ರಮೋದ್ ಜಯ. ಇವರ ಚೊಚ್ಚಲ ನಿರ್ದೇಶನದ ಸಿನಿಮಾ ಹೆಸರು ‘ದಿಲ್ ಖುಷ್’ ಈ ಸಿನಿಮಾದ ನಾಯಕರಾಗಿ ರಂಜಿತ್ ಅನ್ನೋ ಹೊಸ ಪ್ರತಿಭೆ ಚಂದನವನಕ್ಕೆ ನಾಯಕ ನಟರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ನಾಯಕಿಯಾಗಿ ಸ್ಪಂದನ ಸೋಮಣ್ಣ ನಟಿಸುತ್ತಿದ್ದಾರೆ.

ಪ್ರಮುಖ ತಾರಾಗಣದಲ್ಲಿ ರಂಗಾಯಣ ರಘು, ಅರುಣಾ ಬಾಲರಾಜ್, ರವಿ ಭಟ್, ಧರ್ಮಣ್ಣ ಕಡೂರು, ರಘು ರಾಮನಕೊಪ್ಪ, ಸೂರ್ಯ ಪ್ರವೀಣ್, ಮಧುಸೂಧನ್ ಸೇರಿದಂತೆ ಒಂದಷ್ಟು ಖ್ಯಾತ ಕಲಾವಿದರು ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಈ ದಿಲ್ ಖುಷ್ ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಸೋಮವಾರಪೇಟೆಯಲ್ಲಿ ಅದ್ದೂರಿಯಾಗಿ ನಡೆದಿತ್ತು. ಇದೀಗ ಮೂರನೇ ಹಂತದಲ್ಲಿ ಸಿನಿಮಾದ ಸಾಹಸ ದೃಶ್ಯಗಳು ಕೊಡುಗು ಸೋಮವಾರ ಪೇಟೆ ಸುತ್ತಮುತ್ತ ಇರೋ ಕೆಸರುಗದ್ದೆಯಲ್ಲಿ ಭರ್ಜರಿಯಾಗಿ ಚಿತ್ರೀಕರಣ ಆಗುತ್ತಿದೆ. ಈ ಸಿನಿಮಾಗೆ ಸಾಹಸ ನಿರ್ದೇಶಕರಾಗಿ ಅಶೋಕ್ ಅವರು ಕೆಲಸ ಮಾಡಿದ್ದು, ಪ್ರಸಾದ್ ಕೆ.ಶೆಟ್ಟಿ ಅವರ ರಾಗ ಸಂಯೋಜನೆವಿದೆ. ಜ್ಞಾನೇಶ್ ಬಿ ಮಠದ್ ಅವರ ಸಂಕಲನ ಮತ್ತು ನಿವಾಸ್ ನಾರಾಯಣನ್ ಅವರ ಛಾಯಾಗ್ರಹಣ ಸಿನಿಮಾಗಿದೆ.

ಇನ್ನು ಈ ದಿಲ್ ಖುಷ್ ಸಿನಿಮಾ ಕಾಮಿಡ್ ಮತ್ತು ಫ್ಯಾಮಿಲಿ ಎಂಟರ್ಟೈನ್ ಮೆಂಟ್ ಸಿನಿಮಾ ಆಗಿದ್ದು, ಇಡೀ ಕುಟುಂಬ ಕೂತು ನೋಡಬಹುದಾದ ಸಿನಿಮಾ ಆಗಿದೆಯಂತೆ. ಜಯಪ್ರಭ ಕಲರ್ ಫ್ರೇಮ್ಸ್ ಲಾಂಛನದಲ್ಲಿ ಜಯಲಕ್ಷ್ಮಿ ಪ್ರವೀಣ್ ಮತ್ತು ಪ್ರಭ ಶೇಖರ್ ಅವರು ದಿಲ್ ಖುಷ್ ಸಿನಿಮಾಗೆ ಬಂಡವಾಳ ಹೂಡಿಕೆ ಮಾಡಿದ್ದಾರೆ. ನಿರ್ದೇಶನದ ಜೊತೆಗೆ ಪ್ರಮೋದ್ ಜಯ ಅವರು ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಕೂಡ ತಾವೇ ಬರೆದು ತಮ್ಮ ಮೊದಲ ಪ್ರಯತ್ನದಲ್ಲಿಯೇ ಗೆಲ್ಲುವ ಭರವಸೆಯಲ್ಲಿದ್ದಾರೆ. ಇನ್ನು ಸದ್ಯಕ್ಕೆ ಈ ಸಿನಿಮಾದ ಅಂತಿಮ ಘಟ್ಟದ ಚಿತ್ರೀಕರಣ ಕೊಡಗು, ಸೋಮವಾರ ಪೇಟೆ ಸುತ್ತಮುತ್ತ ಭರದಿಂದ ಸಾಗುತ್ತಿದೆ.