ಡಾಲಿ ಧನಂಜಯ ಅವರ ‘ಹೆಡ್ ಬುಷ್’ ಚಿತ್ರದ ಟ್ರೇಲರ್ ಬಿಡುಗಡೆ, ಹೆಚ್ಚಿದ ನಿರೀಕ್ಷೆಗಳು

ಸ್ಯಾಂಡಲ್ ವುಡ್ ನಲ್ಲಿ ಸಖತ್ ಬಿಝಿಯೆಸ್ಟ್ ಬೇಡಿಕೆಯ ನಟ ಅಂದರೆ ಅದು ಡಾಲಿ ಧನಂಜಯ್. ಧನಂಜಯ್ ಕೇವಲ ನಟ ಮಾತ್ರ ಅಲ್ಲ ಸಾಹಿತಿ, ಬರಹಗಾರ, ನಿರ್ಮಾಪಕ ಹೀಗೆ ಬಹುಮುಖ ಪ್ರತಿಭೆ. ಬಡವ ರಾಸ್ಕಲ್ ಸಿನಿಮಾದ ಮೂಲಕ ನಟನಿಂದ ನಿರ್ಮಾಪಕರಾಗಿ ಬಡ್ತಿ ಪಡೆದ ಧನಂಜಯ್ ಈಗ ಹೆಡ್-ಬುಷ್ ಅಂತ ಪ್ಯಾನ್ ಇಂಡಿಯಾ ಸಿನಿಮಾ ಮಾಡುವವರೆಗೆ ಬಂದಿದ್ದಾರೆ. ಧನಂಜಯ್ ಕೇವಲ ಕನ್ನಡ ಮಾತ್ರ ಅಲ್ಲ ತೆಲುಗು ಸಿನಿಮಾಗಳಲ್ಲಿ ಕೂಡಾ ಅವಕಾಶ ಗಿಟ್ಟಿಸಿಕೊಂಡು ನಟಿಸುತ್ತಿದ್ದಾರೆ. ಇದೀಗ ಧನಂಜಯ್ ಸಂಪೂರ್ಣವಾಗಿ ಹೆಡ್-ಬುಷ್ ಸಿನಿಮಾವನ್ನ ಎಲ್ಲಾ ಕಡೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಹೆಡ್ ಬುಷ್ ಸಿನಿಮಾದ ಪೋಸ್ಟರ್ ಮತ್ತು ಹಾಡುಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ.

ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗಿರುವ ಹೆಡ್-ಬುಷ್ ಸಿನಿಮಾದ ಪ್ರಚಾರವನ್ನ ಚಿತ್ರತಂಡ ಭರ್ಜರಿಯಾಗಿಯೇ ಮಾಡುತ್ತಿದೆ. ಇತ್ತೀಚೆಗೆ ದಾವಣಗೆರೆಯಲ್ಲಿ ಹೆಡ್-ಬುಷ್ ಸಿನಿಮಾದ ಟ್ರೇಲರ್ ಅನ್ನ ಅದ್ದೂರಿಯಾಗಿ ರಿಲೀಸ್ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಬ್ಯೂಟಿ ಕ್ವೀನ್ ರಮ್ಯಾ, ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ಇದೇ ಅಕ್ಟೋಬರ್ 21ರಂದು ಹೆಡ್ ಬುಷ್ ಸಿನಿಮಾ ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗ್ತಿದೆ. ಇನ್ನು ಹೆಡ್-ಬುಷ್ ಸಿನಿಮಾ ಭೂಗತ ಲೋಕವನ್ನ ಮತ್ತೊಮ್ಮೆ ನೆನಪಿಸುತ್ತಿರುವ ಸಿನಿಮಾ ಅಂತಾನೇ ಹೇಳ್ಬೋದು. ಯಾಕಂದ್ರೆ ಇದು 90ರ ದಶಕದಲ್ಲಿ ಭೂಗತ ಲೋಕವನ್ನಾಳಿದ ಕುಖ್ಯಾತರನ್ನ ಅವರ ಜೀವನದ ಕಥೆಯನ್ನ ಅದರಲ್ಲೂ ಜಯರಾಜ್ ಅವರ ಒಂದಷ್ಟು ಬದುಕಿನ ಚಿತ್ರಣವನ್ನ ಇಲ್ಲಿ ಕಟ್ಟಿಕೊಡಲಾಗಿದೆಯಂತೆ.

ಪತ್ರಕರ್ತ ಅಗ್ನಿಶ್ರೀಧರ್ ಬರೆದಿರುವ ದಾದಾಗಿರಿಯ ಆ ದಿನಗಳು ಪುಸ್ತಕವನ್ನಾಧರಿಸಿದ ಚಿತ್ರವೇ ಈ ಹೆಡ್-ಬುಷ್. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನ ಅಗ್ನಿ ಶ್ರೀಧರ್ ಅವರೇ ಬರೆದಿದ್ದು, ಶೂನ್ಯ ನಿರ್ದೇಶನ ಮಾಡಿದ್ದಾರೆ. ಇನ್ನು ತಾರಾಗಣದಲ್ಲಿ ಡಾಲಿ ಧನಂಜಯ್, ಲೂಸ್ ಮಾದ ಯೋಗಿ, ಬಾಲು ನಾಗೇಂದ್ರ, ವಸಿಷ್ಟಸಿಂಹ, ರಘು ಮುಖರ್ಜಿ, ರವಿಚಂದ್ರನ್ ಸೇರಿದಂತೆ ಖ್ಯಾತನಾಮರು ನಟಿಸಿದ್ದಾರೆ. ಡಾಲಿ ಧನಂಜಯ್ ಗೆ ಜೋಡಿಯಾಗಿ ಪಾಯಲ್ ರಜಪೂತ್ ನಟಿಸಿದ್ದಾರೆ. ಒಟ್ಟಾರೆಯಾಗಿ ಹೆಡ್-ಬುಷ್ ಸಿನಿಮಾದ ಪ್ರಚಾರ ದಿನದಿಂದ ದಿನಕ್ಕೆ ಜೋರಾಗಿದ್ದು, ಡಾಲಿ ಅಭಿಮಾನಿಗಳು ಈ ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

Leave a Reply

%d bloggers like this: