ಬೆಂಗಳೂರಿನ ‘ಪಂಪ ಮಹಾಕವಿ’ ರಸ್ತೆಯ ಹೆಸರನ್ನು ಬದಲಾಯಿಸಲು ಹೊರಟ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು

ಕನ್ನಡ ಸಾಹಿತ್ಯ ಪರಿಷತ್ ಹೊಸದೊಂದು ವಿವಾದ ಸೃಷ್ಟಿ ಮಾಡುತ್ತಿದೆ. ಚಾಮರಾಜ ಪೇಟೆ ಮಕ್ಕಳ ಕೂಡ ಮತ್ತು ಮಿಂಟೋ ಕಣ್ಣಿನ ಆಸ್ಪತ್ರೆ ನಡುವೆ ಇರುವ ಮಹಾಕವಿ ಪಂಪ ರಸ್ತೆಗೆ ಇದೀಗ ಸಾಹಿತ್ಯ ಪರಿಷತ್ ರಸ್ತೆ ಎಂದು ಬದಲಿಸಲು ಹೊರಟಿದೆ. ಕನ್ನಡ ಸಾಹಿತ್ಯ ಪರಿಷತ್ ತಗೆದುಕೊಳ್ಳುತ್ತಿರುವ ಈ ನಿರ್ಧಾರ ಕನ್ನಡ ಸಾರಸ್ವತ ಲೋಕದ ಖ್ಯಾತ ಮಹಾಕವಿ ಪಂಪನಿಗೆ ಮಾಡುತ್ತಿರೋ ದ್ರೋಹ. ಅದಲ್ಲದೇ ಪಂಪನ ಹೆಸರನ್ನ ಅಳಿಸುವುದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಹೊರಟಿದ್ದಾರೆ ಎಂಬ ಆಕ್ರೋಶ ಕೂಡ ಸಾಹಿತ್ಯ ವಲಯದಲ್ಲಿ ಈಗ ಕೇಳಿ ಬರುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿರೋ ಮಹೇಶ್ ಜೋಷಿ ಅವರು ಈಗಾಗಲೇ ಪಂಪ ಮಹಾಕವಿ ಹೆಸರನ್ನ ಬದಲಿಸುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳಿಗೆ ಪತ್ರ ಕೂಡ ಬರೆದಿದ್ದಾರೆ. ಕ.ಸಾ.ಪ ಅಧ್ಯಕ್ಷ ಮಹೇಶ್ ಜೋಶಿ ಅವರು ಹೇಳೋ ಪ್ರಕಾರ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಇರೋ ರಸ್ತೆಯನ್ನ ಸಂಪೂರ್ಣವಾಗಿ ಕನ್ನಡಮಯ ಮಾಡಿ.

ಈ ರಸ್ತೆಯಲ್ಲಿ ಕನ್ನಡದ ಪ್ರಸಿದ್ದ ಕವಿಗಳ ಪ್ರತಿಮೆಗಳು, ಕನ್ನಡದ ಪ್ರಸಿದ್ದ ಗೀತೆಗಳು, ಪ್ರಸಿದ್ದ ಹೇಳಿಕೆಗಳನ್ನ ಅಳವಡಿಸಿ ಈ ರಸ್ತೆ ಪ್ರತಿಯೊಬ್ಬರಿಗೂ ಕನ್ನಡ ಸಾಹಿತ್ಯ ಪರಿಷತ್ ಗೆ ಭೇಟಿ ನೀಡುವಂತೆ ಮಾಡಲಾಗುತ್ತದೆಯಂತೆ. ಕ.ಸಾ.ಪ ಇರುವ ರಸ್ತೆ ಸಾಹಿತ್ಯ ಪ್ರೇಮಿಗಳ ಕಣ್ಣಿಗೆ ಹಬ್ಬದಂತೆ ಇರಬೇಕು ಆ ರೀತಿಯಾಗಿ ಅಭಿವೃದ್ದಿ ಪಡಿಸುತ್ತೇವೆ ಎಂದು ತಿಳಿಸಿದ್ದಾರೆ. ಅದಲ್ಲದೆ ಈ ರಸ್ತೆಯಲ್ಲಿರುವ ಸ್ಥಳೀಯ ಸಂಘ ಸಂಸ್ಥೆಗಳು, ಕನ್ನಡ ದಿನ ಪತ್ರಿಕೆ, ಪೊಲೀಸ್ ಠಾಣೆ, ಕರ್ನಾಟಕ ಸಂಸ್ಕೃತ ವಿವಿ, ಬ್ಯಾಂಕ್ ಗಳು, ಉದ್ಯಾನವನ, ಮಿಂಟೋ ಕಣ್ಣಿನ ಆಸ್ಪತ್ರೆ ಸೇರಿದಂತೆ ಎಲ್ಲರಿಗೂ ಈ ಹೆಸರು ಬದಲಾಯಿಸುವ ಬಗ್ಗೆ ಮಾಹಿತಿ ನೀಡಲಾಗಿದೆಯಂತೆ. ‘ಕನ್ನಡ ಸಾಹಿತ್ಯ ಪರಿಷತ್’ ರಸ್ತೆ ಎಂದು ಬದಲಾಯಿಸುವ ಇಚ್ಛೆ ಹೊಂದಿದ್ದಾರೆ ಎನ್ನಲಾಗಿದೆ. ಆದರೆ ಇತ್ತ ಸಾಹಿತ್ಯಲೋಕದಲ್ಲಿ ಕ.ಸಾ.ಪ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತವಾಗುತ್ತಿದೆ. ರಸ್ತೆ ಕೆಲಸದ ಬಗ್ಗೆ ಚಿಂತಿಸುವುದು ಕ.ಸಾ.ಪದ ಕೆಲಸವಲ್ಲ. ಪಂಪನ ಹೆಸರು ಬೇಡ ಅನ್ನುವ ಸಾಹಿತ್ಯ ಪರಿಷತ್ ಯಾಕೆ ಬೇಕು ಎಂದು ಹಿರಿಯ ಸಿನಿಮಾ ಪತ್ರಕರ್ತ ಶ್ಯಾಮ್ ಪ್ರಸಾದ್ ಅವರು ತಿಳಿಸಿದ್ದಾರೆ.

ಅದೇ ರೀತಿ ಲೇಖಕಿ ಪ್ರತಿಭಾ ನಂದಕುಮಾರ್ ಅವರು ರಸ್ತೆ ಹೆಸರು ಬದಲಿಸುವ ನಿರ್ಧಾರವನ್ನು ಏಕಪಕ್ಷೀಯವಾಗಿ ಮಾಡುವಂತಿಲ್ಲ. ಪಂಪನ ಹೆಸರು ಬದಲಿಸುವುದಕ್ಕೆ ಕನ್ನಡಗಿರ ವಿರೋಧವಿದೆ. ಕ.ಸಾ.ಪ ಪಂಪನ ಹೆಸರನ್ನ ಅಳಿಸೋ ಪ್ರಯತ್ನ ಮಾಡ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೇ ರೀತಿಯಾಗಿ ಖ್ಯಾತ ಸಾಹಿತಿ ಜೋಗಿ ಅವರು ಕೂಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕ.ಸಾ.ಪ ಮಾಡಬೇಕಾಗಿರೋ ಕೆಲಸ ಬಹಳಷ್ಟಿದೆ. ಜಿಎಸ್ ಶಿವರುದ್ರಪ್ಪ, ಜಿ.ವೆಂಕಟ ಸುಬ್ಬಯ್ಯ, ಹಂಪ ನಾಗರಾಜಯ್ಯ ಅವರಂತಹ ಮಹನಿಯರು ಮಾಡಿರುವಂತಹ ಕೆಲಸವನ್ನ ನೋಡಿ ಈಗಿನ ಅಧ್ಯಕ್ಷರು ಕಲಿಯಬೇಕಾಗಿದೆ. ಅದನ್ನ ಬಿಟ್ಟು ಪಂಪನ ಹೆಸರು ಬದಲಿಸುತ್ತೇವೆ ಅನ್ನೋದು ಶುದ್ದ ಮೂರ್ಖತನ. ಮೊದಲು ದಾರಿ ತಪ್ಪಿರೋ ಕ.ಸಾ.ಪ ಸರಿದಾರಿಯಲ್ಲಿ ನಡೆಯಲಿ ಎಂದು ಕ.ಸಾ.ಪ ಪಂಪ ಮಹಾಕವಿ ರಸ್ತೆಯ ಹೆಸರನ್ನ ಬದಲಿಸುವ ನಿರ್ಣಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.