ಅಳಿಯನ ಮೊದಲ ಸಿನಿಮಾ ನೋಡಿ ಶಿವಣ್ಣ ಫುಲ್ ಖುಷ್

ಅಳಿಯನ ಸಿನಿಮಾ ನೋಡಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಫುಲ್ ಖುಷ್ ಆಗಿದ್ದಾರೆ. ಡಾ.ರಾಜ್ ಕುಮಾರ್ ಪುತ್ರಿ ಪೂರ್ಣಿಮಾ ಮತ್ತು ನಟ ರಾಮ್ ಕುಮಾರ್ ಪುತ್ರ ಧೀರೆನ್ ರಾಮ್ ಕುಮಾರ್ ಶಿವ143 ಸಿನಿಮಾದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಶಿವ143 ಎಂಬ ಲವ್ ಅಂಡ್ ಮಾಸ್ ಕಮರ್ಷಿಯಲ್ ಸಿನಿಮಾದಲ್ಲಿ ನಟ ಧೀರೆನ್ ಅವರ ಅಭಿನಯಕ್ಕೆ ಪ್ರೇಕ್ಷಕ ಪ್ರಭು ಚಪ್ಪಾಳೆ ತಟ್ಟಿದ್ದಾರೆ. ಅದರಂತೆ ತಮ್ಮ ಸೋದರಳಿಯನ ಸಿನಿಮಾ ನೋಡಲು ಶಿವಣ್ಣ ತಮ್ಮ ಪತ್ನಿ ಗೀತಾ ಅವರೊಟ್ಟಿಗೆ ಸಂತೋಷ್ ಥಿಯೇಟರ್ ಗೆ ಬಂದಿದ್ದಾರೆ. ಸಿನಿಮಾ ನೋಡಿದ ನಂತರ ಶಿವಣ್ಣ ಅವರು ಮಾತನಾಡಿ ಧೀರೆನ್ ನಟನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಧೀರೆನ್ ನನ್ನನ್ನಾಗಲೀ, ಅಪ್ಪುವನ್ನಾಗಲೀ ಅಥವಾ ಅವರ ತಂದೆ ರಾಮ್ ಕುಮಾರ್ ಅವರನನ್ನಾಗಲಿ ಅನುಕರಣೆ ಮಾಡಿಲ್ಲ. ಧೀರೆನ್ ತನ್ನ ಸ್ವಂತಿಕೆಯನ್ನ ರೂಢಿಸಿಕೊಂಡು ಅಭಿನಯಿಸಿದ್ದಾನೆ. ಇಡೀ ತಂಡ ಒಂದೊಳ್ಳೆ ಸಿನಿಮಾ ಮಾಡಿದೆ ಎಂದು ಶಿವಣ್ಣ ಧೀರೆನ್ ಅವರ ನಟನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಅದೇ ರೀತಿ ಗೀತಾ ಅವರು ಕೂಡ ಅಳಿಯನ ಸಿನಿಮಾ ನೋಡಿ ಸಂತೋಷ ಪಟ್ಟಿದ್ದಾರೆ‌. ಇನ್ನು ನಟ ಧೀರೇನ್ ಅವರ ತಾಯಿ ಪೂರ್ಣಿಮಾ ಅವರು ಭಾವುಕರಾಗಿ ನನ್ನ ಮಗನ ಸಿನಿಮಾ ನೋಡಿ ನಾನು ಖುಷಿ ಪಡುತ್ತೇನೆ. ಆದರೆ ನಾನು ಸಿನಿ ಪ್ರೇಕ್ಷಕರು ಏನು ಹೇಳುತ್ತಾರೆ ಅನ್ನೋದನ್ನ ಕೇಳೋಕೆ ತುಂಬಾ ಕಾತುರದಿಂದ ಕಾಯುತ್ತಿದ್ದೇನೆ ಎಂದು ಮೊದಲ ದಿನದಲ್ಲೇ ಭಾರಿ ನಿರೀಕ್ಷೆ ಇಟ್ಕೊಂಡಿದ್ರು. ಅದರ ಜೊತೆಗೆ ಶಿವ 143 ಚಿತ್ರ ನಿರ್ದೇಶನ ಮಾಡಿದ ಅನಿಲ್ ಕುಮಾರ್ ಮತ್ತು ನಿರ್ಮಾಪಕ ಜಯಣ್ಣ ಅವರಿಗೆ ತುಂಬಾ ಧನ್ಯವಾದಗಳನ್ನ ಹೇಳೋಕೆ ಇಷ್ಟ ಪಡ್ತೀನಿ ಎಂದು ಹೇಳಿದರು. ಒಟ್ಟಾರೆಯಾಗಿ ಡಾ.ರಾಜ್ ಕುಟುಂಬದಿಂದ ಮತ್ತೊಂದು ಕುಡಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದು, ಕನ್ನಡಕ್ಕೆ ಮತ್ತೊಬ್ಬ ಭರವಸೆಯ ನಟರಾಗುವ ಮುನ್ಸೂಚನೆ ನೀಡಿದ್ದಾರೆ. ಇನ್ನು ಈ ಲವ್ ಅಂಡ್ ಆಕ್ಷನ್ ಸಿನಿಮಾ ಆಗಿರೋ ಶಿವ 143 ಸಿನಿಮಾ ತೆಲುಗಿನ ಆರ್.ಎಕ್ಸ್100 ಸಿನಿಮಾದ ರೀಮೇಕ್ ಆಗಿದೆ. ಶಿವ 143 ಈ ಚಿತ್ರದಲ್ಲಿ ಧೀರೇನ್ ರಾಮ್ ಕುಮಾರ್ ಅವರಿಗೆ ಜೋಡಿಯಾಗಿ ಮಾನ್ವಿತಾ ಕಾಮತ್ ಅವರು ಅಭಿನಯಿಸಿದ್ದಾರೆ. ಇನ್ನು ತಾರಾಗಣದಲ್ಲಿ ಚಿಕ್ಕಣ್ಣ, ಚರಣ್ ರಾಜ್, ಅವಿನಾಶ್, ಪುನೀತ್ ರುದ್ರನಾಗ್ ನಟಿಸಿದ್ದಾರೆ.

Leave a Reply

%d bloggers like this: